Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Friday, January 5, 2024

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ


     

ಶ್ರೀಮತಿ ಉಷಾ ಗೊಬ್ಬೂರ

  




 


ಕ್ರಾಂತಿಜ್ಯೋತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳನ್ನು ಮೆಲುಕು ಹಾಕುವ ಮುನ್ನ......

        ದಿನಾಂಕ: 03/01/2024 ರಂದು ಶ್ರೀ ಮಹಾಶಕ್ತಿ ಮಹಿಳಾ ಒಕ್ಕೂಟ ಸಂಘ (ರಿ) ವಾಡಿ ಇವರ ವತಿಯಿಂದ ಆಯೋಜಿಸಲಾದ ೧೯೩ ನೇ ಸಾವಿತ್ರಿಬಾಯಿ ಫುಲೆಯವರ ಜಯಂತಿಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ವಿಷಯಾಂಶ.....

         ಇಂದು ಭಾರತ ದೇಶ ಯಶಸ್ವಿಯಾಗಿ ಮಂಗಳಯಾನ ಹಾಗೂ ಚಂದ್ರಯಾನಗಳನ್ನು ಕೈಗೊಂಡಿದೆ. ಪ್ರಗತಿ ಹೊಂದುತ್ತಿರುವ ದೇಶಗಳ ಪಟ್ಟಿಯಿಂದ ಪ್ರಗತಿ ಹೊಂದಿದ ದೇಶಗಳ ಪಟ್ಟಿಗೆ ದಾಪುಗಾಲಿಡುತ್ತುದೆ. ಈ ಎಲ್ಲ ಸಾಧನೆಗಳ ಜೊತೆಗೆ ಅನೇಕ ಸಮಸ್ಯೆಗಳು ದೇಶದಲ್ಲಿ ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಜಾಗತಿಕ ತಾಪಮಾನ, ನಿಸರ್ಗದ ಮೇಲೆ ಪರಿಣಾಮ, ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಇವೆಲ್ಲವು ಜನರ ಜೀವನದ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತಿರುವುದು ಆಧುನಿಕ ಯುಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾಗಿವೆ.  ಅಷ್ಟೇ ಅಲ್ಲ ಮಾನವನ ಅಂತರಂಗದ ಸೆಲೆಯು ಕೂಡ ಮಲಿನಗೊಂಡು ಸಮಾಜಕ್ಕೆ ಕೆಡುಕಾಗಿ ಪರಿಣಮಿಸುತ್ತಿದೆ. ಇಂದಿನ ಆಧುನಿಕ ಶಿಕ್ಷಣ ವೈಚಾರಿಕ ಜಾಗೃತಿ ಮೂಡಿಸುವ ಬದಲು ಖಾಸಗೀಕರಣಗೊಂಡು ನಗರ ಪ್ರದೇಶಗಳಲ್ಲಿ ಅದೊಂದು ಉದ್ಯಮವಾಗಿ ತಲೆಯೆತ್ತಿದೆ.ಶಿಕ್ಷಣದ ಮೂಲ ಉದ್ದೇಶ ಮರೆಯಾಗುತ್ತಿದೆ. ಸೇವೆಯ ಬದಲು ವ್ಯಾಪಾರವಾಗಿದೆ.

         ಶಿಕ್ಷಣದಿಂದ ಜನರು ಸುಶಿಕ್ಷಿತರಾಗುವ ಬದಲು ಭಾಷೆ, ಧರ್ಮ, ಜಾತಿ, ಉಪಜಾತಿಗಳೆಂಬ ಮಜಲುಗಳನ್ನು ನಿರ್ಮಿಸುತ್ತಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ, ಸಹಬಾಳ್ವೆ, ಸಹಕಾರ, ಸಹಿಷ್ಣುತೆ, ವಿಶ್ವಬಂಧುತ್ವದ ಪಾಠ ಕಲಿಸುವ ಶಿಕ್ಷಣ ದೊರೆತರಷ್ಟೇ ಶಾಂತಿ ನೆಲೆಸಲಿದೆ. ಈ ಎಲ್ಲಾ ಕಾರಣಗಳಿಂದಲೇ ಜೀವನ ಮೌಲ್ಯಗಳನ್ನು ಬಿತ್ತುವ ಶಿಕ್ಷಕ ವೃತ್ತಿ ಕೇವಲ ಉದ್ಯೋಗವಾಗಿರದೇ ಜವಾಬ್ದಾರಿಯುತ ಕೆಲಸವಾಗಿ ಪರಿಗಣಿಸಲ್ಪಟ್ಟಿದೆ. 

         ಮಕ್ಕಳ ಮೇಲೆ ಪಾಲಕರ “ಔಟ್ ಆಫ್ ಔಟ್” ಅಂಕಗಳನ್ನು ಪಡೆಯಬೇಕೆಂಬ ಅತಿಯಾದ ನಿರೀಕ್ಷೆಯಿಂದ ಓದು ಹೊರೆಯಾಗಿದೆ. ಒಂದು ವೇಳೆ ಮಗು ಹಿಂದುಳಿದರೆ, ಹಿಂಸೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ವಸ್ಥ ಜೀವನಕ್ಕಾಗಿ ಜೀವನ ಮೌಲ್ಯಗಳು ಶಿಕ್ಷಣದಿಂದ ಮಕ್ಕಳಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಕ್ರಮೇಣ ಪ್ರಾಥಮಿಕ ಹಂತದಿಂದ ಉನ್ನತ ಹಂತಕ್ಕೆ ಹೋದಂತೆ ಮಕ್ಕಳು ಕಲಿಕೆಯಿಂದ ಹಿಂದೆ ಸರಿಯುವುದನ್ನು ನಾವು ಕಾಣುತ್ತಿದ್ದೇವೆ. ನಮಗೆ ಸ್ವಾತಂತ್ರ್ಯ ದೊರೆತಾಗ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಕೇವಲ  16% ಇತ್ತು. ಇಂದಿನ ಭಾರತದ ಸಾಕ್ಷರತಾ ಪ್ರಮಾಣ 74% ಇದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಆದರೂ ಕೂಡ ಸಾಕ್ಷರರಾದವರು ನಿಜಕ್ಕೂ ಸುಶಿಕ್ಷಿತರೇ ? ಎಂಬ ಪ್ರಶ್ನೆ ಕಾಡುತ್ತಿದೆ. 

        ಮಕ್ಕಳ ಮೇಲೆ ಅತ್ಯಾಚಾರ ನಿಲ್ಲುತ್ತಿಲ್ಲ. ಬಾಲ ಅಪರಾಧಿಗಳ ಸಂಖ್ಯೆಯು ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಕೆಲವು ವಿಚಾರಶೀಲ ವಿದ್ಯಾರ್ಥಿಗಳು ಧ್ವನಿ ಎತ್ತಿದರೆ, ಶಾಶ್ವತವಾಗಿ ಅವರ ಬಾಯಿ ಮುಚ್ಚಿಸಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆಯರ ಬದುಕುವ ಹಕ್ಕು ಹಾಗೂ ಅವಕಾಶಗಳು ಮೊಟಕುಗೊಳ್ಳುತ್ತಿವೆ. ಆಧುನಿಕ ಶಿಕ್ಷಣದಿಂದ ದೊರೆಯಬೇಕಾದ ವಿಶ್ವ ಭಾತೃತ್ವದ ಭಾವದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.

        ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯವಂತ ಸುಂದರ ಸಮಾಜದ ನಿರ್ಮಾಣಕ್ಕಾಗಿ ಫುಲೆ ದಂಪತಿಗಳ ಆದರ್ಶಗಳನ್ನು ಹಾಗೂ ತತ್ವಗಳನ್ನು ಅವರ ದೃಷ್ಟಿಕೋನದಲ್ಲಿಯೇ ಅರಿತುಕೊಂಡು ಆ ಹಾದಿಯಲ್ಲಿ ನಡೆಯುವುದು ಅವಶ್ಯಕವಾಗಿದೆ. ಸಾಕಷ್ಟು ಅಡೆತಡೆಗಳನ್ನು ಹಿಮ್ಮೆಟ್ಟಿ ಹೆಣ್ಣುಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿದ ಮೊದಲ ಮಹಿಳಾ ಶಿಕ್ಷಕಿ, ಮಹಾಮಾತೆ ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರ ಆದರ್ಶವಾಗಬೇಕಿದೆ. 

         19ನೇ ಶತಮಾನದ ಸಮಾಜದಲ್ಲಿ ಅನೇಕ ಮಹಿಳಾ ವಿರೋಧಿ ಕೆಟ್ಟ ಪದ್ಧತಿಗಳು ತಾಂಡವವಾಡುತ್ತಿದ್ದವು. ಅಕ್ಷರವೆಂಬುದು ಮೇಲ್ಜಾತಿಯವರ ಸ್ವತ್ತಾಗಿತ್ತು. ಮಹಿಳೆ ಕೇವಲ ಮಕ್ಕಳನ್ನು ಹೆರುವ ಯಂತ್ರ, ಮನೆಯವರ ಸೇವೆ ಮಾಡುತ್ತಾ ದಾಸ್ಯದ ಬದುಕಿನಲ್ಲಿಯೇ ತೊಳಲಾಡಬೇಕಿತ್ತು. ಅದೆಷ್ಟು ಮಹಿಳಾ ವಿರೋಧಿ ಆಚರಣೆಗಳು ನಮ್ಮ ದೇಶದಲ್ಲಿ ಇದ್ದವು. ಬಾಲ್ಯ ವಿವಾಹ, ವರದಕ್ಷಿಣೆ, ಕೇಶ ಮುಂಡನ, ಮಹಿಳೆ ಭೋಗದ ವಸ್ತು ಹಾಗೂ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಲೈಂಗಿಕ ಶೋಷಣೆ, ದೇವದಾಸಿ ಪದ್ಧತಿ, ಹೆಣ್ಣುಮಕ್ಕಳೆಂದರೆ ಮನುಷ್ಯರೆಂದು ಪರಿಗಣಿಸಲಾಗದ ವ್ಯವಸ್ಥೆ ಇಂತಹ ಅವಮಾನವೀಯ ಪದ್ಧತಿಗಳು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಕಂಗೆಡಿಸಿದ್ದವು. ಇಂತಹ ಕರಾಳ ವ್ಯವಸ್ಥೆ ಹೋಗಲಾಡಿಸಿ,  ಸುಧಾರಣೆಯ ಸಲುವಾಗಿ ಅಕ್ಷರದ ಬೀಜ ಬಿತ್ತಿದ ಮಹಾನ್ ಚೇತನಗಳೆಂದರೆ ಜ್ಯೋತಿಬಾ ಪುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು. ಇವರು ಕೊಳೆತು ನಾರುವ ವ್ಯವಸ್ಥೆಯನ್ನು ಕಿತ್ತೆಸೆದು, ಹೆಣ್ಣುಮಕ್ಕಳ ಜೀವನದಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿದವರು. ಇದು  ಕೇವಲ ಶಿಕ್ಷಣದಿಂದ ಸಾಧ್ಯ ಎಂದು ಅರಿತು ಮಹಿಳೆಯರಿಗೆ ಶಿಕ್ಷಣ ನೀಡುವ ಮಹಾನ್ ಕಾರ್ಯಕ್ಕೆ ಕೈ ಹಾಕಿದರು. ಇದು ಅಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಇವರ ಈ ಕಾರ್ಯಕ್ಕೆ ಅತಿ ದೊಡ್ಡ ನೊಬೆಲ್ ನಂತಹ ಪ್ರಶಸ್ತಿಗಳು ಕೂಡ ಕಡಿಮೆಯೇ. ಅವರ ಈ ದಿಟ್ಟ ಹೆಜ್ಜೆ ಕೆಳವರ್ಗದ ಹಾಗೂ ಮಧ್ಯಮವರ್ಗದ ಸ್ತ್ರೀ-ಪುರುಷರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಸಮಾಜದಲ್ಲಿ ಕ್ರಾಂತಿಯೇ ಉಂಟಾಯಿತು ಎಂದು ಹೇಳಬಹುದು.

          ಅಕ್ಷರದ ದೀವಟಿಗೆ ಹಿಡಿದು ಕತ್ತಲೆಯಲ್ಲಿ ಇದ್ದ ಮಹಿಳೆಯರನ್ನು ಬೆಳಕಿಗೆ ತಂದ ಅಕ್ಷರದವ್ವ ಸಾವಿತ್ರಿಬಾಯಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನಯಾಗಾವನಲ್ಲಿ 1831 ರ ಜನವರಿ 3 ರಂದು ಜನಿಸಿದರು. ಇವರ 9 ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಜ್ಯೋತಿಬಾ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಮಾಜದ ಚಿತ್ರಣವನ್ನೇ ಬದಲಿಸುವ ದಿಟ್ಟ ಹೆಜ್ಜೆಯನ್ನು ಸ್ವಂತ ಮನೆಯಿಂದಲೇ ಆರಂಭಿಸಿದರು. ಅಂದರೆ ಪತ್ನಿ ಸಾವಿತ್ರಿಗೆ ತಾವೇ ಮನೆಯಲ್ಲಿ ಸ್ವತಹ ಆರಂಭಿಕ ಶಿಕ್ಷಣ ನೀಡಿದರು. ನಂತರ ಶಿಕ್ಷಕ ತರಬೇತಿಯನ್ನು ಕೊಡಿಸಿದರು. ಈ ರೀತಿ ಅವರು ಮೊಟ್ಟಮೊದಲ ಮಹಿಳಾ ಶಿಕ್ಷಕಿಯಾಗಿ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರು. ಈ ದಂಪತಿಗಳ ಈ ಪಯಣ ಅತ್ಯಂತ ಕಠಿಣವಾಗಿತ್ತು. ಇವರೆಂದು ಎದೆಗುಂದದೆ ದಿಟ್ಟ ಹೆಜ್ಜೆಯನಿಟ್ಟರು. ಯಾರು ಎಷ್ಟೇ ಅಡ್ಡಗಾಲು ಹಾಕಿದರೂ “ತೊಟ್ಟ ಪಣ, ಇಟ್ಟ ಹೆಜ್ಜೆ” ಯಿಂದ ಹಿಮ್ಮೆಟ್ಟಲಿಲ್ಲ. ಕಲ್ಲು, ಸಗಣಿ, ಕೊಳೆತ ಮೊಟ್ಟೆ ಎಸೆದು, ನಿಂದಿಸಿದರೂ , ಅಂಜಿಸಿದರೂ ಅಲುಗಾಡದೆ ದೃಢವಾಗಿ ಎದುರಿಸಿ ಮುನ್ನಡೆದರು ಅಕ್ಷರದವ್ವ ಸಾವಿತ್ರಿಬಾಯಿ. 

"ಜ್ಞಾನ ಇಲ್ಲದಿದ್ದರೆ ಸರ್ವನಾಶ ಆಗುತ್ತೆ,

ವಿವೇಕ ಇಲ್ಲದಿದ್ದರೆ ಆಗ್ತೀವಿ ಪಶುಗಳ ಹಾಗೆ" 

ಎಂದು ಸಾವಿತ್ರಿಬಾಯಿ ತಮ್ಮ ‘ಕಾವ್ಯಫುಲೆ’ ಕವನ ಸಂಕಲನದಲ್ಲಿ ಬರೆದುಕೊಂಡಿದ್ದಾರೆ.ಅಂದರೆ ಸಾಹಿತ್ಯದ ಮೂಲಕವೂ ಶಿಕ್ಷಣದ ಮಹತ್ವ ತಿಳಿಸಿದ್ದಾರೆ.

         ಸಮಾಜಕ್ಕೆ ಇವರ ಕೊಡುಗೆ ಅಪಾರ ಅವುಗಳೆಂದರೆ..... ಹೆಣ್ಣು ಮಕ್ಕಳಿಗಾಗಿ ಶಾಲೆ, ಬಾಲ ಹತ್ಯಾ ನಿವಾರಕ ಕೇಂದ್ರ, ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆಗಳು, ವಿಧವಾ ಪುನರ್ ವಿವಾಹ ಚಳುವಳಿ, ಮನೆಯ ಬಾವಿಯನ್ನು ದಲಿತರಿಗೆ ನೀಡಿದ್ದು, ವಿಧವಾ ಗರ್ಭಿಣಿ ಮಹಿಳೆಯರಿಗೆ ವಸತಿ ನಿಲಯ, ಅನಾಥ ಬಾಲಕಿಯರಿಗೆ ಆಶ್ರಮ, ಸತ್ಯ ಶೋಧಕ ಸಮಾಜದ ಸ್ಥಾಪನೆ ಮಾಡಿದರು. ರೀತಿ ರಿವಾಜು ಮುರಿದು ಸ್ವತಃ ಸಾವಿತ್ರಿ ಪತಿಯ ಚಿತೆಗೆ ಅಗ್ನಿ ಸ್ಪರ್ಶಿಸಿದರು. ಬರಗಾಲಪೀಡಿತ ಜನರ ಸೇವೆ ಮಾಡಿದರು. ಪ್ಲೇಗ್ ರೋಗಿಗಳ ಸೇವೆ, ಹೆಣ್ಣು ಮಕ್ಕಳಿಗೆ ಆಸ್ತಿ ಪಡೆಯುವ ಹಕ್ಕುಗಳಿಗಾಗಿ ಪ್ರತಿಪಾದಿಸಿದರು.  ಹೀಗೆ ಒಂದೇ ಎರಡೇ ಜೀವಿತ ಅವಧಿವರೆಗೆ ಅನೇಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದರು. ಇಂದು ನಾವೆಲ್ಲ ಹೆಣ್ಣು ಮಕ್ಕಳು ಶಿಕ್ಷಿತರಾಗಿ ಉನ್ನತ ಸ್ಥಾನದಲ್ಲಿ ಇದ್ದೇವೆ ಎಂದರೆ ಅದು ಅವರ ಅತ್ಯಮೂಲ್ಯ ಕೊಡುಗೆಗಳಿಂದಲೇ ಎಂದು ಎದೆ ತಟ್ಟಿ ಹೇಳಬಹುದು. ಅದೆಲ್ಲವನ್ನು ಸ್ಮರಿಸುತ್ತ ಇಂದು ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. 

ನಿನ್ನ ಜೀವನ ಕುರಿತು ಅದೆಷ್ಟೋ ಪುಸ್ತಕ ಬರೆದಿದ್ದೇವೆ ಅವ್ವ

ಹೊಗಳುತ್ತ ಸಾವಿರಾರು ಕವನ ಕಟ್ಟಿದ್ದೇವೆ ಅವ್ವ

ತಿಂಗಳುಗಟ್ಟಲೇ ಸಭೆ ಸಮಾರಂಭ ಮಾಡುತ್ತಿದ್ದೇವೆ ಅವ್ವ

ನಿನ್ನ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದೇವೆ ಅವ್ವ

ಮಕ್ಕಳಿಗೆ ನಿನ್ನ ವೇಷ ಹಾಕಿಸಿ ಖುಷಿ ಪಡುತ್ತಿದ್ದೇವೆ ಅವ್ವ

ನಿನ್ನ ಹೆಸರಲ್ಲಿ ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಿದ್ದೇವೆ ಅವ್ವ

ಒಗ್ಗಟ್ಟಾಗಿ ಸಂಘಟಿಸಿ ನಿನ್ನ ಹಾದಿ ತುಳಿಯುತ್ತಿದ್ದೇವೆ ಅವ್ವ

ಇಷ್ಟಾದರೂ ಹೆಣ್ಣಿನ ಶೋಷಣೆ , ಅತ್ಯಾಚಾರ , ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬಾಲ್ಯ ವಿವಾಹ, ಭೋಗಿಸುವುದು ನಿಲ್ಲುತ್ತಿಲ್ಲವಲ್ಲ ಅವ್ವ………

        ಪ್ರತಿದಿನ ಪತ್ರಿಕೆಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೇ ದೌರ್ಜನ್ಯ, ಮಹಿಳೆಯರ ಕೊಲೆ, ಮಗುವಿನ ಮೇಲೆ ಅತ್ಯಾಚಾರ, ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಒಂದಲ್ಲೊಂದು ಘಟನೆಗಳು ಇದ್ದೇ ಇರುತ್ತವೆ. ವಿಕೃತ, ಪೈಶಾಚಿಕ ವಿಷಜಂತುಗಳು ಮಗು ಎಂಬುದನ್ನು ಲೆಕ್ಕಿಸದೆ ಹೊಸಕಿ ಹಾಕುತ್ತಿವೆ. ಗಂಡಸಿನ ಕಾಮ ತೃಷೆಯಾಗಿರಲಿ, ಜನಾಂಗೀಯ ಗಲಭೆಗಳಾಗಿರಲಿ ಬಲಿಯಾಗುತ್ತಿರುವುದು ಮಾತ್ರ ಅಮಾಯಕ ಹೆಣ್ಣು ಮಕ್ಕಳು. 

         ಇತ್ತೀಚಿನ ಹಸಿಹಸಿ ಮನ ಕಲುಕುವ ಘಟನೆಗಳಾದ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ವಸತಿ ಶಾಲೆಯಲ್ಲಿರುವ ಮಕ್ಕಳ ಮೇಲಿನ ಅತ್ಯಾಚಾರ, 12 ವರ್ಷದ ಬಾಲಕಿ ಹರಿದ ರಕ್ತ ಸಿಕ್ತ ಬಟ್ಟೆಯೊಂದಿಗೆ ನಡು ರಸ್ತೆಯಲ್ಲಿ ಪತ್ತೆಯಾಗಿದ್ದು, ನಮ್ಮ ಪಕ್ಕದ ತಾಲೂಕಿನಲ್ಲಿಯೇ ಅಪ್ರಾಪ್ತ ಶಾಲಾ ಬಾಲಕಿಯರನ್ನು ಅತ್ಯಾಚಾರಗೈದು ಕೊಲೆ ಪ್ರಕರಣ, ಬಾಲ್ಯವಿವಾಹ, ವರದಕ್ಷಿಣೆ, ಪಿತೃ ಪ್ರಧಾನ ವ್ಯವಸ್ಥೆಯಿಂದಾಗಿ ದಿನಂಪ್ರತಿ ಗಂಡನಿಂದ ಹೆಂಡತಿ ಮೇಲಾಗುವ ದೌರ್ಜನ್ಯ ಹಾಗೂ ಹಿಂಸೆ ಇವೆಲ್ಲವು ಆಧುನಿಕ  ಭಾರತದ ಲಕ್ಷಣಗಳೇ ? ನಾವೆಲ್ಲ ನಿಜಕ್ಕೂ ಸುಶಿಕ್ಷಿತರೇ ? ವೈಚಾರಿಕತೆ ಉಳ್ಳವರೇ ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.

          2012- 2022 ರ ವರೆಗೆ ಹತ್ತು ವರ್ಷಗಳಲ್ಲಿ 3,59,247 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ 30,000 ಕ್ಕೂ ಅಧಿಕ ಅದರಂತೆ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು, ಪ್ರತಿ ಗಂಟೆಗೆ ಸರಾಸರಿ 4 ಅತ್ಯಾಚಾರಗಳು, ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಈ ಎಲ್ಲ ದೌರ್ಜನ್ಯಗಳನ್ನು ತಡೆಯೊದಕ್ಕೆ ಕಾನೂನು ಎಷ್ಟು ಮುಖ್ಯವೋ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿರೋದು ಅಷ್ಟೇ ಮುಖ್ಯ. ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಅವಳು ಭೋಗದ ವಸ್ತುವಲ್ಲ, ಅಮಲಿನ ಪದಾರ್ಥ ಕೂಡ ಅಲ್ಲವೆಂಬ ಸಂಸ್ಕಾರ ನೀಡಬೇಕಿದೆ. ವಿಕೃತ ಮನಸ್ಥಿತಿಗಳು ಬದಲಾಗಬೇಕಿದೆ. ಭಾರತವನ್ನು ಮಹಿಳೆಯರ ಪಾಲಿಗೆ ವಿಶ್ವದಲ್ಲೇ ಅಪಾಯಕಾರಿ ದೇಶವೆಂದು ಗುರುತಿಸಲಾಗುತ್ತಿದೆ. ಮಹಿಳಾ ಸಬಲೀಕರಣವೆನ್ನುವುದು ಮುಖವಾಡವಾಗಿದೆ. ಇಷ್ಟೆಲ್ಲ ಅಪರಾಧಗಳು ನಡೆಯುತ್ತಿವೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಮಾತ್ರ ಆಗುತ್ತಿಲ್ಲ, ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿ, ಜೈಲಿನಿಂದ ಹೊರ ಬಂದ ಮೇಲೆ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. 

         ಇತ್ತೀಚೆಗೆ ಅನೇಕ ಮಹಿಳಾ ಸ್ವ ಸಹಾಯ ಸಂಘಗಳು ಸ್ಥಾಪಿತಗೊಂಡಿವೆ. ಇದರಲ್ಲಿರುವ ಮಹಿಳಾ ಸದಸ್ಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರೊಂದಿಗೆ ಕುಟುಂಬ ನಿರ್ವಹಣೆ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಧನ ಸಹಾಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರಿವುದು ಸಂತಸದ ಸಂಗತಿ. ಅದಕ್ಕೆ ಹಲವಾರು ಪುರುಷರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುತ್ತ ಬೆಂಬಲ ಕೂಡ ನೀಡುತ್ತಿರುವುದು ಮಹಿಳೆಯರ ಬಲ ಹೆಚ್ಚಿದಂತಾಗಿದೆ. ಕೆಲವು ಸಂಘ, ಸಂಸ್ಥೆಗಳು ಅಮಾನುಷ ಘಟನೆಗಳ ವಿರುದ್ಧ ಹೋರಾಟ ಮಾಡುತ್ತಲೇ ಇವೆ. ಆದರೆ ಕೆಲವರಲ್ಲಿರುವ ಗಂಡು ಮೇಲೆಂಬ ರೋಗಗ್ರಸ್ಥ ಸಮಾಜದಲ್ಲಿ ಹೆಣ್ಣು ಇಂದಿಗೂ ಭೋಗದ ವಸ್ತುವಾಗಿಯೇ ಉಳಿದುಕೊಂಡಿದ್ದಾಳೆ. ವಿವಿಧ ರಂಗಗಳಲ್ಲಿ ದಾಪುಗಾಲಿಡುತ್ತಿರುವ ಆಧುನಿಕ ಮಹಿಳೆ ಎಂದೆನಿಸಿಕೊಂಡರೂ, ತಮ್ಮ ಮೇಲಾಗುವ ಶೋಷಣೆಗಳ ವಿರುದ್ಧ ಧ್ವನಿ ಎತ್ತದಿರುವುದು, ವಿಪರ್ಯಾಸವೇ ಸರಿ. ಕೌಟುಂಬಿಕ ಜೀವನದಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಮೇಲಾಗುವ  ಹಿಂಸೆ ಹಾಗೂ ದೌರ್ಜನ್ಯಗಳನ್ನು ಸಹಿಸುತ್ತಿರುವುದು,   ಕಣ್ಣಿದ್ದು ಕುರುಡಾದಂತಾಗಿದೆ. ತನ್ನ ನೆಮ್ಮದಿಯ ಜೀವನ, ಸುಂದರ ಬದುಕಿಗಾಗಿ ಎಲ್ಲಿಯವರೆಗೆ ಸ್ವತಃ ದಿಟ್ಟತನದ ಹೆಜ್ಜೆ ಇಡುವುದಿಲ್ಲವೋ ಅಲ್ಲಿಯವರೆಗೆ ಸಮಾನತೆಯನ್ನು ಕಾಣಲು ಸಾಧ್ಯವಿಲ್ಲ.

         ಎಷ್ಟೇ ಕಠಿಣ  ಕಾನೂನು ತಂದರೂ ಕೂಡ ಬಾಹ್ಯವಾಗಿ ನಿಯಂತ್ರಣ ಹೇರುವುದಕ್ಕಿಂತ ಆಂತರಿಕವಾಗಿ ಗಂಡಿನ ಮನಸ್ಥಿತಿಗಳು ಬದಲಾಗಬೇಕು. ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸಿ ಗೌರವಿಸುವಂತಾಗಬೇಕು. ಜಿಡ್ಡುಗಟ್ಟಿದ ಪುರುಷ ಪ್ರಧಾನತೆಯ ಸಮಾಜ ನಶಿಸಿ, ಸಮಾನತೆಯ ಬೀಜ ಬೆಳೆದು ಹೆಮ್ಮರವಾಗಬೇಕು. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕು. ಅದು ಸಾಧ್ಯವಾಗುವುದು ನಮ್ಮಿಂದಲೇ……

          ಇತ್ತೀಚೆಗೆ ನಾವು ನಾಯಿಕೊಡೆಯಂತೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿರುವ ಸಂಘ ಸಂಸ್ಥೆಗಳನ್ನು ಕಾಣುತ್ತಿದ್ದೇವೆ. ಅದರಲ್ಲಿ ಬಹುತೇಕವುಗಳು ಸಭೆ, ಸಮಾರಂಭ, ಶಾಲು, ಹಾರ, ಪ್ರಶಸ್ತಿಗಳಿಗಷ್ಟೇ ಜೋತು ಬಿದ್ದಿರುವುದು ನೋವಿನ ಸಂಗತಿ. ಸೋಶಿಯಲ್ ಮೀಡಿಯಾಗಳಲ್ಲಿ ಪದಾಧಿಕಾರಿಗಳಿರುವ ಬ್ಯಾನರ್ ಹಾಕಿಕೊಂಡು ಶುಭ ಕೋರುವುದು ಇವೆಲ್ಲ ತೋರಿಕೆಯ ಮುಖವಾಡ ಹೊತ್ತು ತಿರುಗುತ್ತಿವೆ. ಆದರೆ ಇತ್ತೀಚೆಗೆ ಹುಟ್ಟಿರುವ ಸಾವಿತ್ರಿಬಾಯಿ ಫುಲೆ ಸಂಘವು ಅದನ್ನೆಲ್ಲ ಮೀರಿಸಿ ಸಮಾಜದಲ್ಲಿರುವ ಮಹಿಳೆಯರ ಒಳಿತಿಗಾಗಿ ಸಾಕಷ್ಟು ಶ್ರಮಿಸುತ್ತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾಪರ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಾದ ಜಾಥಾ, ಬೀದಿ ನಾಟಕ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಅದರಂತೆ ಮಹಿಳಾಪರ ಕಾನೂನುಗಳ ತಿಳುವಳಿಕೆ ನೀಡುವುದು, ಇವುಗಳನ್ನು ಹಮ್ಮಿಕೊಂಡು ಮಹಿಳಾ ಸಬಲೀಕರಣ ಮಾಡುವುದರಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿ ಎಂದು ಆಶಿಸುವೆ………




No comments:

Post a Comment

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS