Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Tuesday, January 23, 2024

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ


 












ಶ್ರೀಮತಿ ಉಷಾ ಗೊಬ್ಬೂರ

ಅಂದು ಬೆಳಿಗ್ಗೆ ದಿನಪತ್ರಿಕೆಯೊಂದನ್ನು ಓದಲೆಂದು ಕೈಗೆತ್ತಿಕೊಂಡಾಗ ಆಘಾತವೇ ಕಾದಿತ್ತು.

ನಾಗರಿಕತೆ, ಸಂಸ್ಕೃತಿ, ಶ್ರೇಷ್ಠತೆಯ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಇದೇ ದಿನಗಳಲ್ಲಿ ಇವುಗಳನ್ನು ಅಣಕಿಸುವಂತೆ ಅಷ್ಟೇ ವ್ಯಾಪಕವಾಗಿ ಮಾನವರಲ್ಲಿ ಹುದುಗಿರುವ ಸ್ವ-ಪ್ರತಿಷ್ಠೆ, ದ್ವೇಷ, ಅನಾಗರಿಕತೆ, ಸಂಸ್ಕೃತಿ ಹೀನತೆಯ ವಾಸ್ತವ ಚಿತ್ರಣವನ್ನು ಬಯಲು ಮಾಡುತ್ತಿರುವ ಅತ್ಯಾಚಾರ, ಬಲಾತ್ಕಾರ, ಶೋಷಣೆ, ಹಿಂಸೆಯಂಥ ಘಟನೆಗಳು. 

ಪತ್ರಿಕೆಯ ಮುಖಪುಟದಲ್ಲೇ ದಪ್ಪಕ್ಷರದಲ್ಲಿ ಬಂದಿದ್ದು -

ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ !!!!!!

9 ನೇ ತರಗತಿ ವಿದ್ಯಾರ್ಥಿನಿಯು ಮಗುವಿಗೆ ಜನ್ಮ ನೀಡಿದಳು ! 

ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಗೆ ಮಗು ಜನನ ! ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿ ! ಭ್ರೂಣಪತ್ತೆ ಜಾಲ ಪತ್ತೆ !  ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು, ಮಗದೊಂದು. ಮನ ಕಲುಕುವ ಸುದ್ದಿಗಳು. ಸ್ತ್ರೀಯರನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದು ಎದೆತಟ್ಟಿ ಹೇಳುವ ನಾಗರಿಕ ಸಮಾಜದ ಅನಾಗರಿಕ ಸಂಸ್ಕೃತಿಯಿದು ! ವಾಸ್ತವದಲ್ಲಿ ಮಹಿಳೆಯ ಕುರಿತಾಗಿ ಈ ಸಮಾಜದ ದೃಷ್ಟಿಕೋನ ಹೇಗಿದೆ ಎಂಬ ಚಿತ್ರಣ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

ಇವೆಲ್ಲವುಗಳ ನಡುವೆ ಇಂದಿನ ಸಮಾಜದಲ್ಲಿ ಮಹಿಳೆಯು ಸುರಕ್ಷಿತಳು ಎಂದು ಹೇಳಬಹುದೇ….?

ಓಡಬೇಡಿ ನಿಲ್ಲಿ ಕಾರ್ಮೋಡಗಳೇ !!

ಧಾರಾಕಾರವಾಗಿ ಮಳೆಯನೊಮ್ಮೆ ಸುರಿಸಿಬಿಡಿ;

ಕೊಚ್ಚಿ ಹೋಗಲಿ ಮೃಗೀಯ ಮನಸುಗಳು ಕೊಳೆಯಂತೆ !!

ನಿರಾಳರಾಗಲಿ ವನಿತೆಯರು ಸ್ವಚ್ಛ ಊರಂತೆ……

ಬಾಲ್ಯವಿವಾಹ, ಬಾಲ ಗರ್ಭಿಣಿ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆ, ಹೆಣ್ಣು ಮಕ್ಕಳ ಮಾರಾಟ, ದೌರ್ಜನ್ಯ, ವೇಶ್ಯಾವಾಟಿಕೆ ಹೀಗೆ ಒಂದೇ…. ಎರಡೇ….

ಸಮಾಜದಲ್ಲಿ, ಕುಟುಂಬದಲ್ಲಿ

ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ…

ತನ್ನ ದುಡಿಮೆಯ ಹಣ ಖರ್ಚು ಮಾಡುವಂತಿಲ್ಲ….

ಮಹಿಳೆ ಒಂಟಿಯಾಗಿ ತಿರುಗಾಡುವಂತಿಲ್ಲ….

ಸ್ವತಂತ್ರವಾಗಿ ಬದುಕುವಂತಿಲ್ಲ….

ಕೆಲಸದ ಸ್ಥಳದಲ್ಲಿ ಸುರಕ್ಷಿತಳಲ್ಲ….

ನೆಮ್ಮದಿಯಿಂದ ಉಸಿರಾಡಲೂ ಆಗುತ್ತಿಲ್ಲ….

ಪುರುಷ ಪ್ರಧಾನ ಸಮಾಜವು ತನ್ನ ಅನುಕೂಲಕ್ಕೆ ತಕ್ಕಂತೆ ಹೆಣ್ಣನ್ನು ಉಪಯೋಗಿಸಿಕೊಳ್ಳುತ್ತ, ಧರ್ಮದ ಹೆಸರಿನಲ್ಲಿ ಅವಳು ಇರುವುದೇ ಗಂಡಿಗಾಗಿ ಎಂಬಂತೆ ಗಾಢವಾಗಿ ನಂಬಿಸಿ, ಸ್ವತಃ ಅವಳೇ ಅದನ್ನು ಒಪ್ಪಿಕೊಳ್ಳುವಂತೆ ಮಾಡಿದೆ.

ಇದಕ್ಕೆ ಪುಷ್ಟೀಕರಣ ಎಂಬಂತೆ….

ಮನುಸ್ಮೃತಿಯಲ್ಲಿ ಮನು - 

ಪಿತಾ ರಕ್ಷತಿ ಕೌಮಾರ್ಯೇ! ಭರ್ತಾ ರಕ್ಷತಿ ಯೌವನೇ!

ರಕ್ಷತಿ ಸ್ಥವಿರೇ ಪುತ್ರಾಃ! ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ!

(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೩)


ಅಂದರೆ ಸ್ತ್ರೀಯು ಜನಿಸುತ್ತಲೇ ಶೈಶವಾವಸ್ಥೆಯಲ್ಲಿ ತಂದೆ ಅಧೀನದಲ್ಲಿ,ಮದುವೆಯಾದ ನಂತರ ಯವನಾವಸ್ಥೆಯಲ್ಲಿ ಪತಿಯ ಅಧೀನದಲ್ಲಿ,ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿ ಬಾಳಬೇಕಲ್ಲದೆ ಆಕೆಗೆ ಸ್ವಾತಂತ್ರ್ಯವಾಗಿ ಬಾಳುವ ಹಕ್ಕಿಲ್ಲ.

ನಾಸ್ತಿ ಸ್ತ್ರೀಣಾ ಕ್ರಿಯಾ ಮಂತ್ರೈರಿತಿ ಧರ್ಮವ್ಯವಸ್ಥಿತಿ !

ನಿರಿಂದ್ರಿಯಾ ಹೈಮಂತ್ರಾಶ್ಚಸ್ತ್ರೀಯೋ ನೃತಮಿತ ಸ್ಥಿತಿಃ !!


(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೧೮)

ಅಂದರೆ ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಮಂತ್ರ ಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ.

ಹೀಗೆ ಸ್ತ್ರೀಯರ ಸ್ಥಾನಮಾನವನ್ನು ಎಷ್ಟು ಸಾಧ್ಯವೋ ಅಷ್ಟು ನಗಣ್ಯಗೊಳಿಸಿ, ಹೀನಗೊಳಿಸಿ ಮಾಡುವ ಮತ್ತೊಂದು ಕುಚೋದ್ಯವೆಂದರೆ - 

"ಸ್ತ್ರೀಯರನ್ನು ಪೂಜಿಸಿದರೆ ಅಲ್ಲಿ ದೇವತೆಗಳು ವಾಸಿಸುತ್ತಾರೆ.” “ಮಾತೃದೇವೋಭವ”.

ಇಷ್ಟೇ ಅಲ್ಲದೇ....

ಕಾರ್ಯೇಶು ದಾಸಿ !

ಕರುಣೇಶು ಮಂತ್ರಿ !

ಭೋಜ್ಯೇಷು ಮಾತಾ !

ಶಯನೇಶು ರಂಭ !

ಕ್ಷಮಯಾ ಧರಿತ್ರಿ !

ರೂಪೇಷು ಲಕ್ಷ್ಮೀ !

ಹೀಗೆ ಹೊಗಳುತ್ತಾ ಹೊನ್ನ ಶೂಲಕ್ಕೆ ಏರಿಸುವಂತೆ ಭಾಸವಾಗುವ ಈ ವಾಕ್ಯಗಳಲ್ಲಿ ಅಡಕವಾಗಿರುವ ಅಂಶ ಪ್ರತಿಯೊಂದುಕ್ಕೂ ಸ್ತ್ರೀಯರನ್ನು ಪ್ರಮಾಣೀಕೃತಗೊಳಿಸಲಾಗಿದೆ. ಮಿತಿಗಳನ್ನು ಹೇರಲಾಗಿದೆ. ಒಂದೊಂದು ವಿಷಯ ಹಾಗೂ ಕೆಲಸಗಳಿಗೆ ಸ್ತ್ರೀಯರನ್ನು ಅಂಟಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಉನ್ನತಿಗಾಗಿ ಸ್ಥಾನ ಇದ್ದಿದ್ದೇ ಆದಲ್ಲಿ, 

ವಾಸ್ತವದ ಘಟನೆಗಳು ಏನು ಹೇಳುತ್ತಿವೆ….?

ಕೆಲವು ತಥ್ಯಗಳನ್ನು ತಿಳಿಯೋಣ ಬನ್ನಿ…


ಬಾಲ ಗರ್ಭಿಣಿಯರು :

(ಪ್ರಜಾವಾಣಿ ಸುದ್ದಿ)

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 2023 ಜನವರಿಯಿಂದ ನವೆಂಬರ್ ವರೆಗೆ ಈ 11 ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 14 ರಿಂದ 18 ವಯಸ್ಸಿನೊಳಗಿನ 28,657 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ದೇಹ ಗರ್ಭಧಾರಣೆಗೆ ಸಿದ್ಧವಾಗಿರುವುದಿಲ್ಲ. ಇದರಿಂದ ಅಧಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಅಧಿಕ ತೂಕ, ಮೂರ್ಛೆ, ನಿಶ್ಯಕ್ತಿ, ರಕ್ತ ಹೀನತೆ, ತಲೆ ತಿರುಗುವಿಕೆ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇನ್ನು ಜನಿಸುವ ಮಕ್ಕಳು ಕೂಡ ಆರೋಗ್ಯವಂತರಾಗಿರುವುದಿಲ್ಲ.


ಬಾಲ್ಯವಿವಾಹ :

ಆಡೋ ಹುಡುಗಿಗ್ಯಾಕೋ ಕಾಡೋ ಹುಡುಗನು

ಗಿಳಿಯ ಜೊತೆ ಸೇರಿದಂತೆ ಗಿಡುಗನು

ವಯಸಿಲ್ಲ ಬಯಸಿಲ್ಲ ಮದುವೆ ಮಾಡುತಾರ

ಅರಿವಿಲ್ಲ ಗುರಿಯಿಲ್ಲ ಅವಳೇನು ಆಗುತಾಳ


ವಿಜಯದಬ್ಬೆ ಅವರ ಕವನದ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10,65 ಬಾಲ್ಯ ವಿವಾಹಗಳು ನಡೆದಿವೆ. 10,352 ಬಾಲ್ಯ ವಿವಾಹ ದೂರುಗಳು ದಾಖಲಾಗಿವೆ. ಬಾಲ್ಯ ವಿವಾಹದಿಂದಾಗಿ ಹೆಣ್ಣು ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವೈವಾಹಿಕ ಜೀವನಕ್ಕೆ ಸಿದ್ಧರಿರುವುದಿಲ್ಲ. ಇದು ಹೆಣ್ಣುಮಕ್ಕಳ ಶರೀರ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತದೆ. ಮಕ್ಕಳ ಪೋಷಣೆ ಹಾಗೂ ಕುಟುಂಬ ನಿರ್ವಹಣೆಯಲ್ಲಿಯೂ ಕೂಡ ತೊಂದರೆಯನ್ನು ಅನುಭವಿಸುತ್ತಾರೆ. ಅವರ ಭವಿಷ್ಯದ ಕನಸುಗಳು ಈಡೇರದೆ ಜೀವಹಾನಿ ಕೂಡ ಸಂಭವಿಸುತ್ತವೆ. ತಾಯಂದಿರ ಹಾಗೂ ಶಿಶುಗಳ ಮರಣ ಸಂಖ್ಯೆ ಅಧಿಕವಾಗುತ್ತದೆ.


ಹೆಣ್ಣುಮಕ್ಕಳ ಮಾರಾಟ :

2011 ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ 1000 ಪುರುಷರಿಗೆ 943. ಲಿಂಗಾನುಪಾತದಲ್ಲಿ ಕಂಡು ಬಂದ ತೀವ್ರ ಏರುಪೇರು ಹಲವಾರು ಜಿಲ್ಲೆಗಳಲ್ಲಿ ಪುರುಷರಿಗೆ ತಮ್ಮದೇ ಪ್ರದೇಶಗಳಲ್ಲಿ ವಿವಾಹ ವಯಸ್ಸಿನ ಯುವತಿಯರು ಸಿಗುವುದೇ ಕಷ್ಟವಾಗಿದೆ. ಈ ಕಾರಣದಿಂದ ಯುವಕರು ಅಕ್ಕಪಕ್ಕದ ರಾಜ್ಯಗಳಿಂದ ವಿವಾಹ ಯೋಗ್ಯ ಯುವತಿಯರನ್ನು ಕೊಂಡು ತರುವ, ಕೆಲವೊಮ್ಮೆ ಅಪಹರಿಸುವ ಸ್ಥಿತಿಗೆ ಬಂದು ಮುಟ್ಟಿದೆ. ಹೀಗೆ ತಂದ ಯುವತಿಯರನ್ನು ಕಾನೂನು ಬದ್ಧವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ವಿವಾಹ ಮಾಡಿಕೊಳ್ಳುವುದಿಲ್ಲ. ಈ ಮಹಿಳೆಯರಿಗೆ ಯಾವುದೇ ಕಾನೂನಿನ ರಕ್ಷಣೆ ಕೂಡ ಸಿಗುವುದಿಲ್ಲ. ಕೊಂಡುಕೊಂಡ ಕುಟುಂಬದ ಎಲ್ಲ ಪುರುಷರ ದೈಹಿಕ ಬಯಕೆಯನ್ನು ಈಡೇರಿಸುವ ದುಸ್ಥಿತಿಗೆ ತಳ್ಳಲ್ಪಡುತ್ತಾಳೆ. ಯುವತಿಯರನ್ನು ಮಾರಾಟ ಮಾಡುವ ದಲ್ಲಾಳಿಗಳ ಮಾಫಿಯಾ ಗ್ಯಾಂಗ್ ಗಳು ಹುಟ್ಟಿಕೊಂಡಿವೆ. ವೈವಾಹಿಕ ವ್ಯವಸ್ಥೆ ಇಲ್ಲದೆ ಕೆಲವು ಸಮುದಾಯಗಳು ಅಳಿವಿನಂಚಿಗೆ ಬಂದಿವೆ. ಕೆಲವರಂತೂ ಮಡಿವಂತಿಕೆ ಬದಿಗಿಟ್ಟು ಬೇರೆ ಕುಲದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಿದ್ದಾರೆ.


ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ಕರ್ನಾಟಕದ ಉತ್ತರ ಭಾಗವಾದ ಕಲ್ಯಾಣ ಕರ್ನಾಟಕವೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ  ಈ ಹೆಣ್ಣು ಮಕ್ಕಳ ಮಾರಾಟ ಆಘಾತಕಾರಿಯಾಗಿದೆ. ಇದಕ್ಕೆ “ಗುಜ್ಜರ ಕೀ ಶಾದಿ” ಎಂದು ನಾಮಕರಣ ಮಾಡಿ ಗುಜರಾತಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸುವ ಹಾಗೂ ಅದಕ್ಕೆ ಬದಲಾಗಿ ಅವರು ಕೊಡುವ ಒಂದಿಷ್ಟು ಹಣದಿಂದ ಬಡತನದ ಬೇಗೆಯನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ಹೆಣ್ಣು ಹೆತ್ತವರು ಅನುಸರಿಸುತ್ತಿದ್ದಾರೆ.


ಅತ್ಯಾಚಾರ : 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) 2021ರ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ ಸರಾಸರಿ 30000ಕ್ಕೂ ಅಧಿಕ, ಪ್ರತಿದಿನ ಸರಾಸರಿ 87, ಪ್ರತಿ ಗಂಟೆಗೆ 4 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಾಖಲಾಗದಿರುವ ಇನ್ನೆಷ್ಟು ಪ್ರಕರಣಗಳಿವೆಯೋ….. ಅಮಲಿನಲ್ಲಿರುವ ವಿಕೃತ ಮನಸ್ಸುಗಳಿಗೆ ಹೆಣ್ಣು ದೇಹವು ಬಲಿಯಾಗುತ್ತಲೇ ಇದೆ. ನಗರ, ಗ್ರಾಮಾಂತರ ಎನ್ನದೆ ಎಲ್ಲಡೆ ಅವ್ಯಾಹತವಾಗಿ ಅತ್ಯಾಚಾರಗಳು ನಡೆಯುತ್ತಿವೆ. ಹಸುಳೆಯಿಂದ ಹಿಡಿದು 60 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ನಡೆದ ವರದಿಗಳಿವೆ. ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.


ವರದಕ್ಷಿಣೆ :

1961 ರಲ್ಲಿ ವರದಕ್ಷಣೆ ನಿಷೇಧ ಕಾಯ್ದೆ ಭಾರತದಲ್ಲಿ ಜಾರಿಗೆ ತರಲಾಗಿದೆ. ಇಂದಿಗೂ ಕೂಡ ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಸಂಪೂರ್ಣವಾಗಿ ನಿಂತಿಲ್ಲ. ಕಾನೂನಿನ ಕುಣಿಕೆ ಇದ್ದರೂ ರಾಜಾರೋಷವಾಗಿ ನಡೆದಿದೆ. ಎಂತಹ ಸುಶಿಕ್ಷಿತ ಹಾಗೂ ಶ್ರೀಮಂತ ಕುಟುಂಬ ಇದ್ದರೂ ಕೂಡ ಸಾಮಾನ್ಯ ಅಥವಾ ಬಡ ವರ್ಗದ ಪಾಲಕರಿಂದ ವರದಕ್ಷಣೆಗೆ ಬೇಡಿಕೆಯನ್ನು ಇಡುತ್ತಾರೆ. ಕೊಡುವುದರಲ್ಲಿ ಸ್ವಲ್ಪವೂ ಏರುಪೇರು ಆದರೆ ಪರಿಣಾಮ ಮದುವೆ ಮಾಡಿಕೊಂಡ ಹೆಣ್ಣು ಮಗಳ ಮೇಲಾಗುತ್ತದೆ. ಗಂಡನ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ವರದಕ್ಷಿಣೆ ಕಾರಣಕ್ಕಾಗಿ ಗಂಡನ ಮನೆಯವರು ಹೆಣ್ಣುಮಗಳನ್ನು ಕೊಲೆ ಮಾಡುವ ಮೃಗೀಯತೆ ಇಂದಿಗೂ ಕೊನೆಗೊಂಡಿಲ್ಲ.


ಇಲ್ಲಿ ಇದೆಲ್ಲವನ್ನು ನಾನು ಏಕೆ ಪ್ರಸ್ತಾಪಿಸುತ್ತಿರುವೆ ಅಂದರೆ ….

2008ರ ಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಭಾರತ ಸರ್ಕಾರವು ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ, ಸ್ತ್ರೀ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಯನ್ನು ಆರಂಭಿಸಿತು.


ಜನವರಿ 24 ಭಾರತದ ಇತಿಹಾಸದಲ್ಲಿ ವಿಶೇಷತೆಯನ್ನು ಹೊಂದಿದೆ. ಈ ದಿನದಂದು ಇಂದಿರಾಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2008ರಿಂದ ನಾವೆಲ್ಲ ಮಹಿಳಾ ಸಬಲೀಕರಣ ಹಾಗೂ ಸಶಕ್ತಿಕರಣಕ್ಕಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಕೂಡ ಇದರ ಉದ್ದೇಶ ಈಡೇರಿಲ್ಲ. ವ್ಯಾಪಕವಾಗಿ ಎಲ್ಲೆಡೆ ಈ ದಿನಾಚರಣೆ ನಡೆಯುತ್ತಿಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳ ಕುರಿತಾದ ದೃಷ್ಟಿಕೋನದಲ್ಲಿ ಬದಲಾವಣೆ ಆಗುತ್ತಿಲ್ಲ.


ಬಹು ದಿನಗಳ ಹಿಂದೆಯೇ

12ನೇ ಶತಮಾನದಲ್ಲಿಯೇ ವಚನಕಾರರು “ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದ ಆಶಯವ”ನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು “ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು” ಎಂಬುದು ನನಗೆ ಬೇಕು ಎಂದು ಹೇಳಿ ಎಲ್ಲಾ ವರ್ಗದ ಸ್ತ್ರೀಯರಿಗಾಗಿ ಕಾನೂನುಗಳನ್ನು ರಚಿಸಿದರು.

1964-65 ರ ಶಿಕ್ಷಣದ ಬಗೆಗಿನ ಕೊಠಾರಿ ಆಯೋಗವು ತನ್ನ ವರದಿಯಲ್ಲಿ “ಶಿಕ್ಷಣವು ಬದಲಾವಣೆಯ ಅಸ್ತ್ರ” ಈ ಬದಲಾವಣೆ ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ ಯಾವುದೇ ಹಿಂಸಾತ್ಮಕ ಕ್ರಾಂತಿ ಇಲ್ಲದೆ ಬದಲಾವಣೆ ಸಾಧ್ಯ ಎಂದು ಹೇಳುತ್ತದೆ. ಶಾಲಾ ಕಾಲೇಜುಗಳಲ್ಲಿ ಪಠ್ಯಗಳ ಮಾಧ್ಯಮಗಳಿಂದ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಿದರೂ ಕೂಡ ಹೆಣ್ಣು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಹಿಂಸೆ, ಅತ್ಯಾಚಾರಗಳು ನಿಲ್ಲುತ್ತಿಲ್ಲ.


ಮಹಿಳಾ ಸಮಾನತೆ ಕುರಿತು ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಬದಲಾವಣೆ ಮಾತ್ರ ಶೂನ್ಯ.

ಎಷ್ಟು ವೇಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ನಾವೆಲ್ಲ ಸ್ವೀಕರಿಸುತ್ತೇವೆಯೋ, ಅಷ್ಟೇ ವೇಗದಲ್ಲಿ ಮಾನವೀಯ ಮೌಲ್ಯ ತತ್ವ ಮತ್ತು ಸಿದ್ದಾಂತಗಳನ್ನು ಸ್ವೀಕರಿಸುತ್ತಿಲ್ಲವೇಕೆ….?

ಒಂದಷ್ಟು ಸಭ್ಯತೆ, ಪ್ರೀತಿ, ಸ್ನೇಹ, ಕರುಣೆ ಸಮಾನತೆ, ಮಾನವೀಯತೆಯನ್ನು ಬೆಳೆಸಿಕೊಳ್ಳುತ್ತಿಲ್ಲವೇಕೆ….?

ತಾವಾಗಿಯೇ ಉತ್ತರವಿಲ್ಲದ ಪ್ರಶ್ನೆಗಳೆಂದು ಕಾಯಾ, ವಾಚಾ, ಮನಸಾ ಸಾಂಪ್ರದಾಯಿಕ ಪದ್ಧತಿಗಳಿಗೆ ತನ್ನನ್ನೊಡ್ಡಿಕೊಂಡು ಜೀವಿಸುತ್ತಿರುವ ಮಹಿಳೆಯರೂ ಕೂಡ ಧ್ವನಿ ಎತ್ತುತ್ತಿಲ್ಲವೇಕೆ….?

“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂದು ರಾಷ್ಟ್ರಕವಿ ಕುವೆಂಪು ಅವರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ.

ಆದರೆ ಹೆಣ್ಣು ಮಕ್ಕಳ ಎದೆಯ ದನಿ ಕೇಳಲು ಕಿವಿಗಳಿವೆಯೇ ?

ಹೆಣ್ಣು ಇರುವುದು ಕೇವಲ ಗಂಡಿಗಾಗಿಯೇ ಅಲ್ಲ…

ಅವಳು ಮೊದಲು ಅವಳಿಗಾಗಿ …

ಅವಳು ಕೂಡ ಗಂಡಿನಂತೆಯೇ 

ಸಕಲ ಜೀವರಾಶಿಗಳಲ್ಲಿ ಒಬ್ಬಳು.


"ಹೆಣ್ಣನ್ನು ದೇವತೆಯೆಂದು ಪೂಜಿಸುವುದು ಬೇಡ; ತನ್ನಂತೆ ಸರಿಸಮಾನಳು ಎಂದು ಭಾವಿಸಬೇಕಿದೆ‌."


3 comments:

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS