Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Tuesday, January 23, 2024

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ


 












ಶ್ರೀಮತಿ ಉಷಾ ಗೊಬ್ಬೂರ

ಅಂದು ಬೆಳಿಗ್ಗೆ ದಿನಪತ್ರಿಕೆಯೊಂದನ್ನು ಓದಲೆಂದು ಕೈಗೆತ್ತಿಕೊಂಡಾಗ ಆಘಾತವೇ ಕಾದಿತ್ತು.

ನಾಗರಿಕತೆ, ಸಂಸ್ಕೃತಿ, ಶ್ರೇಷ್ಠತೆಯ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಇದೇ ದಿನಗಳಲ್ಲಿ ಇವುಗಳನ್ನು ಅಣಕಿಸುವಂತೆ ಅಷ್ಟೇ ವ್ಯಾಪಕವಾಗಿ ಮಾನವರಲ್ಲಿ ಹುದುಗಿರುವ ಸ್ವ-ಪ್ರತಿಷ್ಠೆ, ದ್ವೇಷ, ಅನಾಗರಿಕತೆ, ಸಂಸ್ಕೃತಿ ಹೀನತೆಯ ವಾಸ್ತವ ಚಿತ್ರಣವನ್ನು ಬಯಲು ಮಾಡುತ್ತಿರುವ ಅತ್ಯಾಚಾರ, ಬಲಾತ್ಕಾರ, ಶೋಷಣೆ, ಹಿಂಸೆಯಂಥ ಘಟನೆಗಳು. 

ಪತ್ರಿಕೆಯ ಮುಖಪುಟದಲ್ಲೇ ದಪ್ಪಕ್ಷರದಲ್ಲಿ ಬಂದಿದ್ದು -

ಇನ್ನೊಂದು ವಸತಿ ಶಾಲೆಯ ವಿದ್ಯಾರ್ಥಿನಿಗೆ ಮಗು ಜನನ !!!!!!

9 ನೇ ತರಗತಿ ವಿದ್ಯಾರ್ಥಿನಿಯು ಮಗುವಿಗೆ ಜನ್ಮ ನೀಡಿದಳು ! 

ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿಗೆ ಮಗು ಜನನ ! ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿ ! ಭ್ರೂಣಪತ್ತೆ ಜಾಲ ಪತ್ತೆ !  ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು, ಮಗದೊಂದು. ಮನ ಕಲುಕುವ ಸುದ್ದಿಗಳು. ಸ್ತ್ರೀಯರನ್ನು ಪೂಜಿಸುತ್ತೇವೆ, ಗೌರವಿಸುತ್ತೇವೆ ಎಂದು ಎದೆತಟ್ಟಿ ಹೇಳುವ ನಾಗರಿಕ ಸಮಾಜದ ಅನಾಗರಿಕ ಸಂಸ್ಕೃತಿಯಿದು ! ವಾಸ್ತವದಲ್ಲಿ ಮಹಿಳೆಯ ಕುರಿತಾಗಿ ಈ ಸಮಾಜದ ದೃಷ್ಟಿಕೋನ ಹೇಗಿದೆ ಎಂಬ ಚಿತ್ರಣ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು.

ಇವೆಲ್ಲವುಗಳ ನಡುವೆ ಇಂದಿನ ಸಮಾಜದಲ್ಲಿ ಮಹಿಳೆಯು ಸುರಕ್ಷಿತಳು ಎಂದು ಹೇಳಬಹುದೇ….?

ಓಡಬೇಡಿ ನಿಲ್ಲಿ ಕಾರ್ಮೋಡಗಳೇ !!

ಧಾರಾಕಾರವಾಗಿ ಮಳೆಯನೊಮ್ಮೆ ಸುರಿಸಿಬಿಡಿ;

ಕೊಚ್ಚಿ ಹೋಗಲಿ ಮೃಗೀಯ ಮನಸುಗಳು ಕೊಳೆಯಂತೆ !!

ನಿರಾಳರಾಗಲಿ ವನಿತೆಯರು ಸ್ವಚ್ಛ ಊರಂತೆ……

ಬಾಲ್ಯವಿವಾಹ, ಬಾಲ ಗರ್ಭಿಣಿ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ಹಿಂಸೆ, ಹೆಣ್ಣು ಮಕ್ಕಳ ಮಾರಾಟ, ದೌರ್ಜನ್ಯ, ವೇಶ್ಯಾವಾಟಿಕೆ ಹೀಗೆ ಒಂದೇ…. ಎರಡೇ….

ಸಮಾಜದಲ್ಲಿ, ಕುಟುಂಬದಲ್ಲಿ

ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಂತಿಲ್ಲ…

ತನ್ನ ದುಡಿಮೆಯ ಹಣ ಖರ್ಚು ಮಾಡುವಂತಿಲ್ಲ….

ಮಹಿಳೆ ಒಂಟಿಯಾಗಿ ತಿರುಗಾಡುವಂತಿಲ್ಲ….

ಸ್ವತಂತ್ರವಾಗಿ ಬದುಕುವಂತಿಲ್ಲ….

ಕೆಲಸದ ಸ್ಥಳದಲ್ಲಿ ಸುರಕ್ಷಿತಳಲ್ಲ….

ನೆಮ್ಮದಿಯಿಂದ ಉಸಿರಾಡಲೂ ಆಗುತ್ತಿಲ್ಲ….

ಪುರುಷ ಪ್ರಧಾನ ಸಮಾಜವು ತನ್ನ ಅನುಕೂಲಕ್ಕೆ ತಕ್ಕಂತೆ ಹೆಣ್ಣನ್ನು ಉಪಯೋಗಿಸಿಕೊಳ್ಳುತ್ತ, ಧರ್ಮದ ಹೆಸರಿನಲ್ಲಿ ಅವಳು ಇರುವುದೇ ಗಂಡಿಗಾಗಿ ಎಂಬಂತೆ ಗಾಢವಾಗಿ ನಂಬಿಸಿ, ಸ್ವತಃ ಅವಳೇ ಅದನ್ನು ಒಪ್ಪಿಕೊಳ್ಳುವಂತೆ ಮಾಡಿದೆ.

ಇದಕ್ಕೆ ಪುಷ್ಟೀಕರಣ ಎಂಬಂತೆ….

ಮನುಸ್ಮೃತಿಯಲ್ಲಿ ಮನು - 

ಪಿತಾ ರಕ್ಷತಿ ಕೌಮಾರ್ಯೇ! ಭರ್ತಾ ರಕ್ಷತಿ ಯೌವನೇ!

ರಕ್ಷತಿ ಸ್ಥವಿರೇ ಪುತ್ರಾಃ! ನ ಸ್ತ್ರೀ ಸ್ವಾತಂತ್ರ್ಯ ಅರ್ಹತಿ!

(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೩)


ಅಂದರೆ ಸ್ತ್ರೀಯು ಜನಿಸುತ್ತಲೇ ಶೈಶವಾವಸ್ಥೆಯಲ್ಲಿ ತಂದೆ ಅಧೀನದಲ್ಲಿ,ಮದುವೆಯಾದ ನಂತರ ಯವನಾವಸ್ಥೆಯಲ್ಲಿ ಪತಿಯ ಅಧೀನದಲ್ಲಿ,ವೃದ್ಧಾಪ್ಯದಲ್ಲಿ ಮಗನ ರಕ್ಷಣೆಯಲ್ಲಿ ಬಾಳಬೇಕಲ್ಲದೆ ಆಕೆಗೆ ಸ್ವಾತಂತ್ರ್ಯವಾಗಿ ಬಾಳುವ ಹಕ್ಕಿಲ್ಲ.

ನಾಸ್ತಿ ಸ್ತ್ರೀಣಾ ಕ್ರಿಯಾ ಮಂತ್ರೈರಿತಿ ಧರ್ಮವ್ಯವಸ್ಥಿತಿ !

ನಿರಿಂದ್ರಿಯಾ ಹೈಮಂತ್ರಾಶ್ಚಸ್ತ್ರೀಯೋ ನೃತಮಿತ ಸ್ಥಿತಿಃ !!


(ಮನುಸ್ಮೃತಿ ಅಧ್ಯಾಯ ೯ ಶ್ಲೋಕ ೧೮)

ಅಂದರೆ ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸುವ ಮಂತ್ರ ಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ.

ಹೀಗೆ ಸ್ತ್ರೀಯರ ಸ್ಥಾನಮಾನವನ್ನು ಎಷ್ಟು ಸಾಧ್ಯವೋ ಅಷ್ಟು ನಗಣ್ಯಗೊಳಿಸಿ, ಹೀನಗೊಳಿಸಿ ಮಾಡುವ ಮತ್ತೊಂದು ಕುಚೋದ್ಯವೆಂದರೆ - 

"ಸ್ತ್ರೀಯರನ್ನು ಪೂಜಿಸಿದರೆ ಅಲ್ಲಿ ದೇವತೆಗಳು ವಾಸಿಸುತ್ತಾರೆ.” “ಮಾತೃದೇವೋಭವ”.

ಇಷ್ಟೇ ಅಲ್ಲದೇ....

ಕಾರ್ಯೇಶು ದಾಸಿ !

ಕರುಣೇಶು ಮಂತ್ರಿ !

ಭೋಜ್ಯೇಷು ಮಾತಾ !

ಶಯನೇಶು ರಂಭ !

ಕ್ಷಮಯಾ ಧರಿತ್ರಿ !

ರೂಪೇಷು ಲಕ್ಷ್ಮೀ !

ಹೀಗೆ ಹೊಗಳುತ್ತಾ ಹೊನ್ನ ಶೂಲಕ್ಕೆ ಏರಿಸುವಂತೆ ಭಾಸವಾಗುವ ಈ ವಾಕ್ಯಗಳಲ್ಲಿ ಅಡಕವಾಗಿರುವ ಅಂಶ ಪ್ರತಿಯೊಂದುಕ್ಕೂ ಸ್ತ್ರೀಯರನ್ನು ಪ್ರಮಾಣೀಕೃತಗೊಳಿಸಲಾಗಿದೆ. ಮಿತಿಗಳನ್ನು ಹೇರಲಾಗಿದೆ. ಒಂದೊಂದು ವಿಷಯ ಹಾಗೂ ಕೆಲಸಗಳಿಗೆ ಸ್ತ್ರೀಯರನ್ನು ಅಂಟಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಉನ್ನತಿಗಾಗಿ ಸ್ಥಾನ ಇದ್ದಿದ್ದೇ ಆದಲ್ಲಿ, 

ವಾಸ್ತವದ ಘಟನೆಗಳು ಏನು ಹೇಳುತ್ತಿವೆ….?

ಕೆಲವು ತಥ್ಯಗಳನ್ನು ತಿಳಿಯೋಣ ಬನ್ನಿ…


ಬಾಲ ಗರ್ಭಿಣಿಯರು :

(ಪ್ರಜಾವಾಣಿ ಸುದ್ದಿ)

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್ ಪ್ರಕಾರ 2023 ಜನವರಿಯಿಂದ ನವೆಂಬರ್ ವರೆಗೆ ಈ 11 ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ 14 ರಿಂದ 18 ವಯಸ್ಸಿನೊಳಗಿನ 28,657 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ದೇಹ ಗರ್ಭಧಾರಣೆಗೆ ಸಿದ್ಧವಾಗಿರುವುದಿಲ್ಲ. ಇದರಿಂದ ಅಧಿಕ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಅಧಿಕ ತೂಕ, ಮೂರ್ಛೆ, ನಿಶ್ಯಕ್ತಿ, ರಕ್ತ ಹೀನತೆ, ತಲೆ ತಿರುಗುವಿಕೆ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇನ್ನು ಜನಿಸುವ ಮಕ್ಕಳು ಕೂಡ ಆರೋಗ್ಯವಂತರಾಗಿರುವುದಿಲ್ಲ.


ಬಾಲ್ಯವಿವಾಹ :

ಆಡೋ ಹುಡುಗಿಗ್ಯಾಕೋ ಕಾಡೋ ಹುಡುಗನು

ಗಿಳಿಯ ಜೊತೆ ಸೇರಿದಂತೆ ಗಿಡುಗನು

ವಯಸಿಲ್ಲ ಬಯಸಿಲ್ಲ ಮದುವೆ ಮಾಡುತಾರ

ಅರಿವಿಲ್ಲ ಗುರಿಯಿಲ್ಲ ಅವಳೇನು ಆಗುತಾಳ


ವಿಜಯದಬ್ಬೆ ಅವರ ಕವನದ ಸಾಲುಗಳು ಅದೆಷ್ಟು ಅರ್ಥಪೂರ್ಣವಾಗಿವೆ.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 10,65 ಬಾಲ್ಯ ವಿವಾಹಗಳು ನಡೆದಿವೆ. 10,352 ಬಾಲ್ಯ ವಿವಾಹ ದೂರುಗಳು ದಾಖಲಾಗಿವೆ. ಬಾಲ್ಯ ವಿವಾಹದಿಂದಾಗಿ ಹೆಣ್ಣು ಮಕ್ಕಳು ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ವೈವಾಹಿಕ ಜೀವನಕ್ಕೆ ಸಿದ್ಧರಿರುವುದಿಲ್ಲ. ಇದು ಹೆಣ್ಣುಮಕ್ಕಳ ಶರೀರ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀಳುತ್ತದೆ. ಮಕ್ಕಳ ಪೋಷಣೆ ಹಾಗೂ ಕುಟುಂಬ ನಿರ್ವಹಣೆಯಲ್ಲಿಯೂ ಕೂಡ ತೊಂದರೆಯನ್ನು ಅನುಭವಿಸುತ್ತಾರೆ. ಅವರ ಭವಿಷ್ಯದ ಕನಸುಗಳು ಈಡೇರದೆ ಜೀವಹಾನಿ ಕೂಡ ಸಂಭವಿಸುತ್ತವೆ. ತಾಯಂದಿರ ಹಾಗೂ ಶಿಶುಗಳ ಮರಣ ಸಂಖ್ಯೆ ಅಧಿಕವಾಗುತ್ತದೆ.


ಹೆಣ್ಣುಮಕ್ಕಳ ಮಾರಾಟ :

2011 ರ ಜನಗಣತಿ ಪ್ರಕಾರ ಭಾರತದ ಲಿಂಗಾನುಪಾತ 1000 ಪುರುಷರಿಗೆ 943. ಲಿಂಗಾನುಪಾತದಲ್ಲಿ ಕಂಡು ಬಂದ ತೀವ್ರ ಏರುಪೇರು ಹಲವಾರು ಜಿಲ್ಲೆಗಳಲ್ಲಿ ಪುರುಷರಿಗೆ ತಮ್ಮದೇ ಪ್ರದೇಶಗಳಲ್ಲಿ ವಿವಾಹ ವಯಸ್ಸಿನ ಯುವತಿಯರು ಸಿಗುವುದೇ ಕಷ್ಟವಾಗಿದೆ. ಈ ಕಾರಣದಿಂದ ಯುವಕರು ಅಕ್ಕಪಕ್ಕದ ರಾಜ್ಯಗಳಿಂದ ವಿವಾಹ ಯೋಗ್ಯ ಯುವತಿಯರನ್ನು ಕೊಂಡು ತರುವ, ಕೆಲವೊಮ್ಮೆ ಅಪಹರಿಸುವ ಸ್ಥಿತಿಗೆ ಬಂದು ಮುಟ್ಟಿದೆ. ಹೀಗೆ ತಂದ ಯುವತಿಯರನ್ನು ಕಾನೂನು ಬದ್ಧವಾಗಿ ಹಾಗೂ ಸಂಪ್ರದಾಯ ಬದ್ಧವಾಗಿ ವಿವಾಹ ಮಾಡಿಕೊಳ್ಳುವುದಿಲ್ಲ. ಈ ಮಹಿಳೆಯರಿಗೆ ಯಾವುದೇ ಕಾನೂನಿನ ರಕ್ಷಣೆ ಕೂಡ ಸಿಗುವುದಿಲ್ಲ. ಕೊಂಡುಕೊಂಡ ಕುಟುಂಬದ ಎಲ್ಲ ಪುರುಷರ ದೈಹಿಕ ಬಯಕೆಯನ್ನು ಈಡೇರಿಸುವ ದುಸ್ಥಿತಿಗೆ ತಳ್ಳಲ್ಪಡುತ್ತಾಳೆ. ಯುವತಿಯರನ್ನು ಮಾರಾಟ ಮಾಡುವ ದಲ್ಲಾಳಿಗಳ ಮಾಫಿಯಾ ಗ್ಯಾಂಗ್ ಗಳು ಹುಟ್ಟಿಕೊಂಡಿವೆ. ವೈವಾಹಿಕ ವ್ಯವಸ್ಥೆ ಇಲ್ಲದೆ ಕೆಲವು ಸಮುದಾಯಗಳು ಅಳಿವಿನಂಚಿಗೆ ಬಂದಿವೆ. ಕೆಲವರಂತೂ ಮಡಿವಂತಿಕೆ ಬದಿಗಿಟ್ಟು ಬೇರೆ ಕುಲದ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಿದ್ದಾರೆ.


ಇನ್ನೊಂದು ಕಳವಳಕಾರಿ ಸಂಗತಿ ಎಂದರೆ ಕರ್ನಾಟಕದ ಉತ್ತರ ಭಾಗವಾದ ಕಲ್ಯಾಣ ಕರ್ನಾಟಕವೆಂದು ಕರೆಸಿಕೊಳ್ಳುವ ಕಲಬುರಗಿ ಜಿಲ್ಲೆಯಲ್ಲಿ  ಈ ಹೆಣ್ಣು ಮಕ್ಕಳ ಮಾರಾಟ ಆಘಾತಕಾರಿಯಾಗಿದೆ. ಇದಕ್ಕೆ “ಗುಜ್ಜರ ಕೀ ಶಾದಿ” ಎಂದು ನಾಮಕರಣ ಮಾಡಿ ಗುಜರಾತಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸುವ ಹಾಗೂ ಅದಕ್ಕೆ ಬದಲಾಗಿ ಅವರು ಕೊಡುವ ಒಂದಿಷ್ಟು ಹಣದಿಂದ ಬಡತನದ ಬೇಗೆಯನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ಹೆಣ್ಣು ಹೆತ್ತವರು ಅನುಸರಿಸುತ್ತಿದ್ದಾರೆ.


ಅತ್ಯಾಚಾರ : 

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) 2021ರ ವಾರ್ಷಿಕ ವರದಿಯ ಪ್ರಕಾರ ದೇಶದಲ್ಲಿ 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ ಸರಾಸರಿ 30000ಕ್ಕೂ ಅಧಿಕ, ಪ್ರತಿದಿನ ಸರಾಸರಿ 87, ಪ್ರತಿ ಗಂಟೆಗೆ 4 ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಾಖಲಾಗದಿರುವ ಇನ್ನೆಷ್ಟು ಪ್ರಕರಣಗಳಿವೆಯೋ….. ಅಮಲಿನಲ್ಲಿರುವ ವಿಕೃತ ಮನಸ್ಸುಗಳಿಗೆ ಹೆಣ್ಣು ದೇಹವು ಬಲಿಯಾಗುತ್ತಲೇ ಇದೆ. ನಗರ, ಗ್ರಾಮಾಂತರ ಎನ್ನದೆ ಎಲ್ಲಡೆ ಅವ್ಯಾಹತವಾಗಿ ಅತ್ಯಾಚಾರಗಳು ನಡೆಯುತ್ತಿವೆ. ಹಸುಳೆಯಿಂದ ಹಿಡಿದು 60 ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ನಡೆದ ವರದಿಗಳಿವೆ. ಮೃಗೀಯ ವರ್ತನೆಗಳು ಪುನರಾವರ್ತನೆಯಾಗುತ್ತಲೇ ಇವೆ.


ವರದಕ್ಷಿಣೆ :

1961 ರಲ್ಲಿ ವರದಕ್ಷಣೆ ನಿಷೇಧ ಕಾಯ್ದೆ ಭಾರತದಲ್ಲಿ ಜಾರಿಗೆ ತರಲಾಗಿದೆ. ಇಂದಿಗೂ ಕೂಡ ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ಸಂಪೂರ್ಣವಾಗಿ ನಿಂತಿಲ್ಲ. ಕಾನೂನಿನ ಕುಣಿಕೆ ಇದ್ದರೂ ರಾಜಾರೋಷವಾಗಿ ನಡೆದಿದೆ. ಎಂತಹ ಸುಶಿಕ್ಷಿತ ಹಾಗೂ ಶ್ರೀಮಂತ ಕುಟುಂಬ ಇದ್ದರೂ ಕೂಡ ಸಾಮಾನ್ಯ ಅಥವಾ ಬಡ ವರ್ಗದ ಪಾಲಕರಿಂದ ವರದಕ್ಷಣೆಗೆ ಬೇಡಿಕೆಯನ್ನು ಇಡುತ್ತಾರೆ. ಕೊಡುವುದರಲ್ಲಿ ಸ್ವಲ್ಪವೂ ಏರುಪೇರು ಆದರೆ ಪರಿಣಾಮ ಮದುವೆ ಮಾಡಿಕೊಂಡ ಹೆಣ್ಣು ಮಗಳ ಮೇಲಾಗುತ್ತದೆ. ಗಂಡನ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ವರದಕ್ಷಿಣೆ ಕಾರಣಕ್ಕಾಗಿ ಗಂಡನ ಮನೆಯವರು ಹೆಣ್ಣುಮಗಳನ್ನು ಕೊಲೆ ಮಾಡುವ ಮೃಗೀಯತೆ ಇಂದಿಗೂ ಕೊನೆಗೊಂಡಿಲ್ಲ.


ಇಲ್ಲಿ ಇದೆಲ್ಲವನ್ನು ನಾನು ಏಕೆ ಪ್ರಸ್ತಾಪಿಸುತ್ತಿರುವೆ ಅಂದರೆ ….

2008ರ ಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಭಾರತ ಸರ್ಕಾರವು ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ, ಸ್ತ್ರೀ ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಯನ್ನು ಆರಂಭಿಸಿತು.


ಜನವರಿ 24 ಭಾರತದ ಇತಿಹಾಸದಲ್ಲಿ ವಿಶೇಷತೆಯನ್ನು ಹೊಂದಿದೆ. ಈ ದಿನದಂದು ಇಂದಿರಾಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. 2008ರಿಂದ ನಾವೆಲ್ಲ ಮಹಿಳಾ ಸಬಲೀಕರಣ ಹಾಗೂ ಸಶಕ್ತಿಕರಣಕ್ಕಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸುತ್ತಿದ್ದೇವೆ. ಆದರೆ ಇಂದಿಗೂ ಕೂಡ ಇದರ ಉದ್ದೇಶ ಈಡೇರಿಲ್ಲ. ವ್ಯಾಪಕವಾಗಿ ಎಲ್ಲೆಡೆ ಈ ದಿನಾಚರಣೆ ನಡೆಯುತ್ತಿಲ್ಲ. ಸಮಾಜದಲ್ಲಿ ಹೆಣ್ಣು ಮಕ್ಕಳ ಕುರಿತಾದ ದೃಷ್ಟಿಕೋನದಲ್ಲಿ ಬದಲಾವಣೆ ಆಗುತ್ತಿಲ್ಲ.


ಬಹು ದಿನಗಳ ಹಿಂದೆಯೇ

12ನೇ ಶತಮಾನದಲ್ಲಿಯೇ ವಚನಕಾರರು “ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದ ಆಶಯವ”ನ್ನು ತಮ್ಮ ವಚನಗಳ ಮೂಲಕ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು “ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು” ಎಂಬುದು ನನಗೆ ಬೇಕು ಎಂದು ಹೇಳಿ ಎಲ್ಲಾ ವರ್ಗದ ಸ್ತ್ರೀಯರಿಗಾಗಿ ಕಾನೂನುಗಳನ್ನು ರಚಿಸಿದರು.

1964-65 ರ ಶಿಕ್ಷಣದ ಬಗೆಗಿನ ಕೊಠಾರಿ ಆಯೋಗವು ತನ್ನ ವರದಿಯಲ್ಲಿ “ಶಿಕ್ಷಣವು ಬದಲಾವಣೆಯ ಅಸ್ತ್ರ” ಈ ಬದಲಾವಣೆ ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ ಯಾವುದೇ ಹಿಂಸಾತ್ಮಕ ಕ್ರಾಂತಿ ಇಲ್ಲದೆ ಬದಲಾವಣೆ ಸಾಧ್ಯ ಎಂದು ಹೇಳುತ್ತದೆ. ಶಾಲಾ ಕಾಲೇಜುಗಳಲ್ಲಿ ಪಠ್ಯಗಳ ಮಾಧ್ಯಮಗಳಿಂದ ಲಿಂಗ ಸಮಾನತೆ ಕುರಿತು ಜಾಗೃತಿ ಮೂಡಿಸಿದರೂ ಕೂಡ ಹೆಣ್ಣು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಹಿಂಸೆ, ಅತ್ಯಾಚಾರಗಳು ನಿಲ್ಲುತ್ತಿಲ್ಲ.


ಮಹಿಳಾ ಸಮಾನತೆ ಕುರಿತು ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ ಬದಲಾವಣೆ ಮಾತ್ರ ಶೂನ್ಯ.

ಎಷ್ಟು ವೇಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ನಾವೆಲ್ಲ ಸ್ವೀಕರಿಸುತ್ತೇವೆಯೋ, ಅಷ್ಟೇ ವೇಗದಲ್ಲಿ ಮಾನವೀಯ ಮೌಲ್ಯ ತತ್ವ ಮತ್ತು ಸಿದ್ದಾಂತಗಳನ್ನು ಸ್ವೀಕರಿಸುತ್ತಿಲ್ಲವೇಕೆ….?

ಒಂದಷ್ಟು ಸಭ್ಯತೆ, ಪ್ರೀತಿ, ಸ್ನೇಹ, ಕರುಣೆ ಸಮಾನತೆ, ಮಾನವೀಯತೆಯನ್ನು ಬೆಳೆಸಿಕೊಳ್ಳುತ್ತಿಲ್ಲವೇಕೆ….?

ತಾವಾಗಿಯೇ ಉತ್ತರವಿಲ್ಲದ ಪ್ರಶ್ನೆಗಳೆಂದು ಕಾಯಾ, ವಾಚಾ, ಮನಸಾ ಸಾಂಪ್ರದಾಯಿಕ ಪದ್ಧತಿಗಳಿಗೆ ತನ್ನನ್ನೊಡ್ಡಿಕೊಂಡು ಜೀವಿಸುತ್ತಿರುವ ಮಹಿಳೆಯರೂ ಕೂಡ ಧ್ವನಿ ಎತ್ತುತ್ತಿಲ್ಲವೇಕೆ….?

“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂದು ರಾಷ್ಟ್ರಕವಿ ಕುವೆಂಪು ಅವರು ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾರೆ.

ಆದರೆ ಹೆಣ್ಣು ಮಕ್ಕಳ ಎದೆಯ ದನಿ ಕೇಳಲು ಕಿವಿಗಳಿವೆಯೇ ?

ಹೆಣ್ಣು ಇರುವುದು ಕೇವಲ ಗಂಡಿಗಾಗಿಯೇ ಅಲ್ಲ…

ಅವಳು ಮೊದಲು ಅವಳಿಗಾಗಿ …

ಅವಳು ಕೂಡ ಗಂಡಿನಂತೆಯೇ 

ಸಕಲ ಜೀವರಾಶಿಗಳಲ್ಲಿ ಒಬ್ಬಳು.


"ಹೆಣ್ಣನ್ನು ದೇವತೆಯೆಂದು ಪೂಜಿಸುವುದು ಬೇಡ; ತನ್ನಂತೆ ಸರಿಸಮಾನಳು ಎಂದು ಭಾವಿಸಬೇಕಿದೆ‌."


Thursday, January 11, 2024

ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವ ದಿನ


 







"ಸ್ವಾಮಿ ವಿವೇಕಾನಂದರು - ರಾಷ್ಟ್ರೀಯ ಯುವದಿನ"

- ಉಷಾ ಗೊಬ್ಬೂರ


           ಅಮೇರಿಕದ ಒಬ್ಬ ಮಹಿಳೆ ಭಾರತೀಯ ಯುವಕನ ಮಾತು, ವ್ಯಕ್ತಿತ್ವಗಳಿಂದ ಆಕರ್ಷಿತರಾಗಿ ಆ ಯುವಕನ ಹತ್ತಿರ ಬಂದು ನನ್ನನ್ನು ನೀವು ಮದುವೆಯಾಗಬೇಕು ಎಂದು ನಿವೇದಿಸಿಕೊಂಡಳು. ಅವರು ಯಾಕೆ ತಾಯಿ ಎಂದು ಕೇಳಿದರು. ಆಗ ಆ ಮಹಿಳೆ “ನಿಮ್ಮಂತೆಯೇ ಜ್ಞಾನವಂತನಾದ ಮಗುವನ್ನು ಹೆತ್ತು ಈ ಜಗತ್ತಿಗೆ ಕೊಡುಗೆಯಾಗಿ ನೀಡಬೇಕು” ಎಂದಳು. ಇದಕ್ಕೆ ಆ ಯುವಕ “ನಾನೊಬ್ಬ ಸನ್ಯಾಸಿ, ನಿಮ್ಮನ್ನು ಮದುವೆಯಾಗಲು ಸಾಧ್ಯವಿಲ್ಲ. ನಿಮಗೆ ನನ್ನಂತಹ ಮಗು ಬೇಕೆಂಬ ಆಸೆ ಇದ್ದರೆ ನನ್ನನ್ನೇ ಮಗುವೆಂದು ತಿಳಿದುಕೊಳ್ಳಿ. ನಿಮ್ಮ ಆಸೆ ಈಡೇರಿದಂತಾಗುತ್ತದೆ ಅಂದರು. ಆ ಮಹಿಳೆ ತನ್ನ ಬಯಕೆಗೆ ಪಶ್ಚಾತ್ತಾಪ ಪಟ್ಟು ಯುವಕನ ಶಿಷ್ಯಳಾಗುತ್ತಾಳೆ‌. ಇಂತಹ ಮಹೋನ್ನತ ವ್ಯಕ್ತಿತ್ವವುಳ್ಳ ಮಹಾಪುರುಷನನ್ನು ನೀವೀಗಾಗಲೇ ಊಹಿಸಿರುತ್ತೀರಿ ಎಂದಾದ ಮೇಲೆ 'ಅವರು ಬೇರೆ ಯಾರೂ ಅಲ್ಲ' ಮಹಾನ್ ತತ್ವಜ್ಞಾನಿ, ದೇಶಭಕ್ತ, ಸಮಾಜ ಸುಧಾರಕ, ಭಾರತಾಂಬೆಯ ವರಪುತ್ರ, ಧೀಮಂತ ಸನ್ಯಾಸಿ ಸ್ವಾಮಿ ವಿವೇಕಾನಂದರು.

          ಸ್ವಾಮಿ ವಿವೇಕಾನಂದರು 1863, ಜನವರಿ 12 ರಂದು ಕಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ ಹಾಗೂ ತಾಯಿ ಭುವನೇಶ್ವರಿ ದೇವಿ. ಇವರ ಬಾಲ್ಯದ ಹೆಸರು ನರೇಂದ್ರ. ನಂತರ ಸ್ವಾಮಿ ವಿವೇಕಾನಂದರೆನಿಸಿಕೊಂಡರು. ಬಾಲ್ಯದಲ್ಲಿ ನರೇಂದ್ರ ತುಂಟತನ, ಚತುರತೆ ಹಾಗೂ ಬುದ್ಧಿವಂತಿಕೆಗೆ ಹೆಸರಾಗಿದ್ದರು. ಭಿಕ್ಷುಕರು ಮನೆಗೆ ಬಂದರೆ ಮೈಮೇಲಿನ ಬಟ್ಟೆಯನ್ನೇ ಕೊಟ್ಟುಬಿಡುತ್ತಿದ್ದರು. ದುರ್ಬಲರ ಉದ್ಧಾರಕ್ಕಾಗಿ, ಬಡ ಜನರ ಸೇವೆಗಾಗಿ,ಮಹಿಳೆಯರ ಸಬಲೀಕರಣಕ್ಕಾಗಿ, ಯುವಕರಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದರು. 

        “ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ.” ಎಂಬ ಪ್ರಖರ ವಾಣಿಯ ಮೂಲಕ ಯುವಕರನ್ನು ಬಡಿದೆಬ್ಬಿಸಿ, ಅವರ ಮನೋಬಲವನ್ನು ಹೆಚ್ಚಿಸಿ, ಆತ್ಮವಿಶ್ವಾಸದಿಂದ ಮುನ್ನುಗ್ಗುವಂತೆ ಮಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು. ಇವರ ಹೆಸರಿನಲ್ಲೇ ಒಂದು ಶಕ್ತಿ ಇದೆ. ಕೇವಲ ಹೆಸರು ಕೇಳಿದರೆ ಸಾಕು ದೇಹದಲ್ಲಿ ಮಿಂಚಿನ ಸಂಚಾರವಾಗುತ್ತದೆ. ಒಂದಿಡೀ ದೇಶವನ್ನೇ ಆವರಿಸಿಕೊಂಡು ಬದಲಾವಣೆಯ ಹೊಸ ಪರ್ವವನ್ನೇ ತರಬಲ್ಲ ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ಗಾಂದೀಜಿ, ಅಂಬೇಡ್ಕರ್ ಅವರಂಥ ಮಹಾನ್ ನಾಯಕರಲ್ಲಿ  ಸ್ವಾಮಿ ವಿವೇಕಾನಂದರು ಒಬ್ಬರು.

     “ಯುವಶಕ್ತಿಯಲ್ಲೇ ದೇಶದ ಭವಿಷ್ಯವಿದೆ” ಎಂಬುದನ್ನು ಮನಗಂಡು ಯುವಶಕ್ತಿಯನ್ನು ಇನ್ನಿಲ್ಲದಂತೆ ಎಚ್ಚರಿಸಿದವರು ವಿವೇಕಾನಂದರು.. ಭಾರತವು ಬಡತನ, ಅನಕ್ಷರತೆ, ಮೌಢ್ಯತೆ, ಪಾಶ್ಚಾತ್ಯರ ದಾಸ್ಯ, ಅಜ್ಞಾನದಂತಹ ಕೂಪಗಳಲ್ಲಿ ಬಿದ್ದು, ಒದ್ದಾಡುತ್ತಿರುವ ದಿನಗಳಲ್ಲಿ ಈ ಎಲ್ಲ ಋಣಾತ್ಮಕ ಪರಿಸ್ಥಿತಿಗಳ ಪರಿಹಾರಕ್ಕಾಗಿ ಯುವಪಡೆಯನ್ನು ಅಸ್ತ್ರವನ್ನಾಗಿ ಬದಲಿಸ ಹೊರಟರು. 

         ಭಾರತೀಯ ಸಮಾಜದ ಬದುಕನ್ನು ಅರ್ಥಪೂರ್ಣವಾಗಿ ತಿದ್ದಲು ದೃಢಸಂಕಲ್ಪ ಮಾಡಿದರು. ಧರ್ಮದ ಹೆಸರಿನಲ್ಲಿನ ಮೌಢ್ಯವನ್ನು ಖಂಡಿಸಿದರು. ”ಸದೃಢ ದೇಹದಲ್ಲಿ ಸದೃಢ ಮನಸ್ಸು” ನೆಲೆಗೊಂಡಿರುತ್ತದೆಂದು ಹೇಳಿ ಉತ್ತಮ ಶರೀರದ ಮಹತ್ವದ ಜೊತೆಗೆ ಧನಾತ್ಮಕ ಚಿಂತನೆ ಕೈಗೊಳ್ಳಲು ಪ್ರೇರೇಪಿಸಿದರು. “ದರಿದ್ರ ದೇವೋ ಭವ” ಅಂದರೆ ಬಡಜನರ ಸೇವೆಯನ್ನು ಮಾಡುವುದೆಂದರೆ, ನಿಜವಾಗಿ ನಾರಾಯಣನ ಸೇವೆ ಮಾಡಿದಂತೆ ಎಂದು ತಿಳಿಸಿಕೊಟ್ಟರು. ಯುವಕರಲ್ಲಿ ವೈಚಾರಿಕತೆ, ದೇಶಭಕ್ತಿ, ದೇಶಾಭಿಮಾನ ಮೂಡಿಸಿ, ಸುಂದರ ಬದುಕನ್ನು ಕಟ್ಟಿಕೊಳ್ಳಲು ಕರೆ ನೀಡಿದರು. ವಿವೇಕಾನಂದರು ಮೊದಲು ದೇಶದಾದ್ಯಂತ ಸಂಚರಿಸಿ, ದೇಶದ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಂಡರು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ, ಅಲ್ಲಿನ ಜನರಿಗೆ ಭಾರತದ ಜ್ಞಾನ, ಸಂಸ್ಕೃತಿಯನ್ನು ಪರಿಚಯಿಸಿ, ಭಾರತಕ್ಕೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಡಬೇಕೆಂಬುದು ಅವರ ಮಹದಾಸೆಯಾಗಿತ್ತು. ಅಂದುಕೊಂಡ ಸಮಯಕ್ಕೆ ಸರಿಯಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲೆಂದು ಅಮೇರಿಕಾಕ್ಕೆ ಹೊರಟರು. 

           1893 ಸಪ್ಟೆಂಬರ್ 11 ರಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು “ಅಮೇರಿಕಾದ ಸಹೋದರ, ಸಹೋದರಿಯರೇ” ಎಂದು ಆತ್ಮೀಯತೆಯಿಂದ ಸಂಬೋಧಿಸಿದರು. ಈ ಚಿಕ್ಕ ವಾಕ್ಯ ಕೇಳಿದೊಡನೆಯೇ ತುಂಬಿದ ಸಭೆ ಅಪಾರ ಮೆಚ್ಚುಗೆಯನ್ನು ಪ್ರಚಂಡ ಕರತಾಡನ ಮಾಡುವ ಮೂಲಕ ವ್ಯಕ್ತಪಡಿಸಿತು. ಪುಟ್ಟ ಭಾಷಣದ ಮೂಲಕ ಎಲ್ಲರ ಮನಸೂರೆಗೊಂಡು, ಭಾರತೀಯತೆಯ ಹಿರಿಮೆಯನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟರು. ನಂತರ ಯುರೋಪಿನ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿ ಭಾರತದ ಹಿರಿಮೆಯನ್ನು ಎತ್ತರಿಸಿದರು.

        “ಆಶಿಷ್ಟರೂ, ಬಲಿಷ್ಟರೂ, ದೃಢಿಷ್ಟರೂ, ಮೇಧಾವಿಗಳೂ ಆದಂತಹ ಯುವಕರು ಮಾತ್ರ ಭಗವಂತನನ್ನು ಪಡೆಯಬಹುದು.” ಎಂದು ವೇದ ಸಾರುವುದು. ತಾರುಣ್ಯದ ಶಕ್ತಿ ಇರುವಾಗ ನಿಮ್ಮ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಮುದುಕರಾಗಿ ಶಕ್ತಿ ಕುಗ್ಗಿದ ಮೇಲೆ ಅಲ್ಲ. ನವತಾರುಣ್ಯದ ಉತ್ಸಾಹದಲ್ಲಿ ಅದನ್ನು ನಿರ್ಧರಿಸಬೇಕಾಗಿದೆ. ಕೆಲಸ ಮಾಡಿ; ಈಗ ತಾನೇ ವಿಕಸಿತವಾದ, ಯಾರೂ ಮುಟ್ಟದ, ಮೂಸಿ ನೋಡದ ಹೂವುಗಳನ್ನು ಭಗವಂತನ ಅಡಿದಾವರೆಯಲ್ಲಿಡುವುದಕ್ಕೆ ಇದೇ ಸಮಯ. ದೇವರು ಇದನ್ನು ಮಾತ್ರ ಪರಿಗ್ರಹಿಸುವನು ಎಂದು ವಿವೇಕಾನಂದರು ಯುವಕರಿಗೆ  ಕರೆ ನೀಡಿದರು. ಅದರಂತೆ ಈ ಕೆಳಗಿನ ಸಂದೇಶಗಳನ್ನು ನೀಡಿದರು.

1. ”ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ.”

2. ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲದಿದ್ದರೆ, ನೀವು ವಿಶ್ವದ ಅತ್ಯಂತ ಬುದ್ಧಿವಂತ ವ್ಯಕ್ತಿಯೊಂದಿಗೆ ಸಂವಹನ ಮಾಡುವುದನ್ನು ಬಿಟ್ಟುಬಿಡುತ್ತೀರಿ.

3. ನೀವು ನಿಮ್ಮನ್ನು ನಂಬದ ಹೊರತು, ನಿಮ್ಮ ದೇವರನ್ನು ನಂಬಲು ಸಾಧ್ಯವಿಲ್ಲ.

4. ನಿಮಗೆ ಸಹಾಯ ಮಾಡುವ ಜನರನ್ನು ಎಂದಿಗೂ ಮರೆಯಬೇಡಿ. ನಿಮ್ಮನ್ನು ಪ್ರೀತಿಸುವವರನ್ನು ಎಂದಿಗೂ ದ್ವೇಷಿಸಬೇಡಿ. ನಿಮ್ಮನ್ನು ನಂಬಿದವರಿಗೆ ಎಂದಿಗೂ ಮೋಸ ಮಾಡಬೇಡಿ.

5. ಓದಲು ಏಕಾಗ್ರತೆ ಅಗತ್ಯ, ಏಕಾಗ್ರತೆಗೆ ಗಮನ ಅಗತ್ಯ. ಧ್ಯಾನದ ಮೂಲಕ ನಾವು ಇಂದ್ರಿಯಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಂಡು ಏಕಾಗ್ರತೆಯನ್ನು ಸಾಧಿಸಬಹುದು.

6. ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಅತ್ಯುನ್ನತ ಆದರ್ಶಗಳಿಂದ ತುಂಬಿಕೊಳ್ಳಿ. ಇದರ ನಂತರ ನೀವು ಮಾಡುವ ಯಾವುದೇ ಕೆಲಸವು ಉತ್ತಮವಾಗಿರುತ್ತದೆ.

7. ಯಾವ ವ್ಯಕ್ತಿಯು ಅಮರತ್ವವನ್ನು ಪಡೆದಿರುತ್ತಾನೋ ಅವನು ಯಾವುದೇ ಲೌಕಿಕ ವಸ್ತುಗಳಿಂದ ವಿಚಲಿತನಾಗುವುದಿಲ್ಲ.

8. ದೈಹಿಕವಾಗಿ, ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದಾದರೂ, ಅದನ್ನು ವಿಷದಂತೆ ತಿರಸ್ಕರಿಸಿ.

9. ಯಾವಾಗಲೂ ನಾವು ಮಾತನಾಡುವ ಮುನ್ನ ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು. ನಮ್ಮ ಆಲೋಚನೆಗಳು ಯಾವಾಗಲೂ ಜೀವಂತವಾಗಿರುತ್ತವೆ ಮತ್ತು ಪದಗಳು ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಗೆ ಸಂಚರಿಸುತ್ತಲೇ ಇರುತ್ತದೆ.

10. ಹೋರಾಟವು ದೊಡ್ಡದಾಗಿದ್ದರೆ, ವಿಜಯವು ಹೆಚ್ಚು ಅದ್ಭುತವಾಗಿರುತ್ತದೆ. ನೀವು ಸಮಸ್ಯೆಗಳನ್ನು ಎದುರಿಸದಿದ್ದರೆ ನೀವು ತಪ್ಪು ದಾರಿಯಲ್ಲಿದ್ದೀರಿ ಎನ್ನುವುದನ್ನು ಖಚಿತವಾಗಿ ಹೇಳಬಹುದು. ನಿಮ್ಮನ್ನು ನೀವು ದುರ್ಬಲ ಎಂದು ಪರಿಗಣಿಸುವುದೇ ದೊಡ್ಡ ಪಾಪ.

11. ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂತಹ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ.

12. ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

13. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

          ಯುವಕರು ರಾಷ್ಟ್ರದ ಅಮೂಲ್ಯ ಸಂಪತ್ತು ಮತ್ತು ಆ ದೇಶದ ಶಕ್ತಿ ಕೂಡ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ. ಯುವಕರಲ್ಲಿ ಏನನ್ನೂ ಮಾಡಬಲ್ಲ ಶಕ್ತಿ ಇದೆ. ಇತಿಹಾಸದಲ್ಲಿ ಬಹುತೇಕ ಎಲ್ಲಾ ಕ್ರಾಂತಿಗಳು ಯುವಜನರಿಂದ ಪ್ರಾರಂಭವಾಗುತ್ತವೆ. ಯುವಕರು ಯಾವುದೇ ಸಮಾಜದ ನಿರ್ಮಾಣ ಘಟಕಗಳು. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಹೂಡಿಕೆಗಳಾಗಿವೆ. ಯೌವನವು ಜೀವನದಲ್ಲಿ ಕಲಿಯಬೇಕಾದ ಮತ್ತು ಜೀವನದಲ್ಲಿ ಪ್ರಯೋಗಿಸಬೇಕಾದ ಹಂತವಾಗಿದೆ. 

“My life, My rules” ಎಂಬುದು ಪ್ರಸ್ತುತ ಯುವ ಪೀಳಿಗೆಯ ಧ್ಯೇಯವಾಕ್ಯವಾಗಿದೆ. ಆದರೆ ಇಂದು ಕೆಲವು ಯುವಕರು ಈ ಕೆಳಗಿನ ಸಮಸ್ಯೆಗಳಿಂದ ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಂಡಿದ್ದಾರೆ. 

1.  ಮಾದಕ ವ್ಯಸನ : ಯುವಕರು ಧೂಮಪಾನ, ಮಧ್ಯಪಾನ ಹಾಗೂ ಮಾದಕ ಪದಾರ್ಥಗಳ ದಾಸರಾಗಿದ್ದಾರೆ. ವಿನಯ, ವಿಧೇಯತೆ, ನಮ್ರತೆ ಯುವಕರಲ್ಲಿ ಮರೆಯಾಗುತ್ತಿವೆ. ಆಕ್ರಮಣಕಾರಿ ಸ್ವಭಾವದಿಂದ ಹೆತ್ತವರು ಹಾಗೂ ಸಮಾಜದ ಬಗೆಗಿನ ಕಾಳಜಿ ಕಣ್ಮರೆಯಾಗಿದೆ. ರಾಷ್ಟ್ರದ ಶಕ್ತಿಯಾಗಬೇಕಿದ್ದವರು, ದೌರ್ಬಲ್ಯವಾಗಿ ಹೊರ ಹೊಮ್ಮುತ್ತಿದ್ದಾರೆ.


2. ಡಿಜಿಟಲ್ ದಾಸ : ಸೋಶಿಯಲ್ ಮೀಡಿಯಾಗಳಾದ WhatsApp, Instagram, Facebook, YouTube,Twitter, Online gaming, reels, shorts, Internet, Web search, Cyber bulling, Cyber crime ಹೀಗೆ ಒಂದೇ ಎರಡೇ ಮೊಬೈಲ್ ಮಾಯೆಗೆ ಬಲಿಯಾಗಿ ಅಪಾಯಕಾರಿ ಘಟನೆಗಳಿಗೆ/ ಅನಾಹುತಗಳಿಗೆ ಆಹ್ವಾನ ನೀಡುತ್ತಿದ್ದಾರೆ.


3. ಬದಲಾದ ಜೀವನ ಶೈಲಿ : ಕೆಲಸದ ಒತ್ತಡ, ತಡರಾತ್ರಿ ಪಾರ್ಟಿ, ಮೋಜು-ಮಸ್ತಿ, Laptop ಬಳಕೆ, ಟಿ.ವ್ಹಿ. ಮನೋರಂಜನೆ ಇನ್ನಿತರೆ ಕಾರಣಗಳಿಂದ ತಡರಾತ್ರಿ ಮಲಗುವುದು ಇವೆಲ್ಲ ಪ್ರಕೃತಿಯ ವಿರುದ್ಧ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿವೆ.


4. ನೈತಿಕ ಮೌಲ್ಯಗಳ ಕೊರತೆ : ಉತ್ತಮ ಮೌಲ್ಯಗಳ ಕೊರತೆಯಿಂದಾಗಿ ಕುಟುಂಬ, ಸಮಾಜ, ದೇಶ ಹಾಗೂ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸುತ್ತಿದ್ದಾರೆ. ದೇಶದ್ರೋಹಿ ಚಟುವಟಿಕೆಗಳು, ಭಯೋತ್ಪಾದನೆ, ಹೆಣ್ಣು ಮಕ್ಕಳ ಮೇಲೆ ಹಿಂಸೆ, ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರಗಳಂತಹ ಮೃಗೀಯ ಕೃತ್ಯಗಳನ್ನು ಎಸಗುತ್ತಿದ್ದಾರೆ.


5. ನಿರುದ್ಯೋಗ : “Empty mind is devil’s workshop.” ಎನ್ನುವರು. ನಿರುದ್ಯೋಗಿ ಯುವಕರು ಕೆಲಸವಿಲ್ಲದೆ, ಕಂಗಾಲಾಗಿ ಹಣಕ್ಕಾಗಿ ಕೆಟ್ಟ ಹಾದಿಗಳನ್ನು ಅನುಸರಿಸಿ ವಿಕೃತ ಮನಸ್ಸಿನವರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ.


6. ಮಾನಸಿಕ ಒತ್ತಡ : ಯುವ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಖಿನ್ನತೆ, ಆತಂಕ, ಆತ್ಮವಿಶ್ವಾಸದ ಕೊರತೆ, ಭಯ, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯ ಕೊರತೆ, ಕುಟುಂಬದ ಅತಿಯಾದ ನಿರೀಕ್ಷೆ ಈಡೇರಿಸುವಲ್ಲಿನ ಅಸಮರ್ಥತೆ, ಭದ್ರ ಭವಿಷ್ಯ ರೂಪಿಸಿಕೊಳ್ಳುವಲ್ಲಿನ ವೈಫಲ್ಯಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ.


7. ಆತ್ಮಹತ್ಯೆ : ಇತ್ತೀಚಿನ ಯುವಕರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳೆ ಹಾಗೂ ಪುರುಷರು ಇಬ್ಬರಲ್ಲೂ ಆತ್ಮಹತ್ಯೆಯ ಪ್ರಮಾಣ ಹೆಚ್ಚಾಗಿದೆ.

ಈ ಎಲ್ಲ ಸಮಸ್ಯೆಗಳು ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತಿವೆ. ದೇಶದಲ್ಲಿ ಶಾಂತಿ ಹಾಗೂ ಸುಭದ್ರತೆಗೆ ಧಕ್ಕೆಯನ್ನುಂಟು ಮಾಡುತ್ತಿವೆ. 


ಸ್ವಾಮಿ ವಿವೇಕಾನಂದರು ಧೀಮಂತ ಸನ್ಯಾಸಿ, ಭಾರತಾಂಬೆಯ ವರಪುತ್ರ, ಸಮಾಜ ಸುಧಾರಕ, ಮಹಾಪುರುಷ ತಮ್ಮ 39ನೇ ವರ್ಷದ ಕಿರುವಯಸ್ಸಿನಲ್ಲಿಯೇ ಅಂದರೆ 1902ನೇ ಇಸವಿ ಜುಲೈ 4ರಂದು ವಿಧಿವಶರಾದರು. ಭೌತಿಕವಾಗಿ ಇಲ್ಲವಾದರೂ ಅವರ ಸಾಧನೆಗಳು ಹಾಗೂ ಸಂದೇಶಗಳು ಮಾತ್ರ ಅಜರಾಮರ. ಅವರ ಸಂದೇಶಗಳಿಂದ ಜೀವನದ ಅಭ್ಯುದಯಕ್ಕೆ ಎಲ್ಲವೂ ದೊರೆಯುತ್ತದೆ. ಅವರ ಚಿಂತನೆ ಹಾಗೂ ಸಂದೇಶಗಳು ಯುವಕರಿಗೆ ಪ್ರೇರಣೆ ನೀಡಿ ಅವರ ವ್ಯಕ್ತಿತ್ವ ವಿಕಸನಕ್ಕೆ ದಿವ್ಯ ಮಂತ್ರಗಳಾಗಿವೆ. ಹಾಗಾಗಿ ಅವರ ಸಂದೇಶಗಳು ಬರೀ ಬಾಯಿ ಮಾತುಗಳಾಗಿ ಉಳಿಯದೆ ಜೀವನದಲ್ಲಿ ಅಳವಡಿಸಿಕೊಂಡು ಆ ನಿಟ್ಟಿನಲ್ಲಿ ಯುವಕರ ಜೀವನ ಬದಲಾಗುವುದು ಅನಿವಾರ್ಯವಾಗಿದೆ. 1984 ರಿಂದಲೂ ಪ್ರತಿ ವರ್ಷ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ನಾವೆಲ್ಲ “ರಾಷ್ಟ್ರೀಯ ಯುವ ದಿನ” ಎಂದು ಆಚರಣೆ ಮಾಡುತ್ತಲೇ ಬರುತ್ತಿದ್ದೇವೆ. ಬರಿ ಆಚರಣೆ ಮಾಡಿದರೆ ಸಾಲದು ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ.

ಯುವಕರೇ…….

ದೇಶಸೇವೆಯೆಂದರೆ, 

ಕೇವಲ ಕೈಯಲ್ಲಿ ಬಣ್ಣ ಬಣ್ಣದ ದೊಡ್ಡ ಧ್ವಜಗಳನ್ನು ಹೊತ್ತು ತಿರುಗುವುದೇ……???

ಜೋರಾಗಿ ಸದ್ದು ಮಾಡುತ್ತ ಬೇಕ್ ರ್ಯಾಲಿಗಳನ್ನು ಮಾಡುವುದೇ….??? 

ಜೋರಾಗಿ ಘೋಷಣೆಗಳನ್ನು ಕೂಗುತ್ತ ತಿರುಗುವುದೇ….??? 

ದೊಡ್ಡದಾಗಿ ಭಾಷಣ ಮಾಡುವುದೇ….???

ಸಭೆ- ಸಮಾರಂಭಗಳನ್ನು ಮಾಡುವುದೇ…..??? 

ಗಡಿಯಲ್ಲಿ ಗನ್ನು ಹಿಡಿದು ನಿಲ್ಲುವುದಷ್ಟೇ ದೇಶಸೇವೆಯಲ್ಲ.


ದೇಶವೆಂದರೆ ಇಲ್ಲಿನ ಜನ, ದೇಶವೆಂದರೆ ಇಲ್ಲಿನ ಸಮಾಜ, ದೇಶವೆಂದರೆ ನಿಮ್ಮೆಲ್ಲರ ಜೀವನ. ಮೊದಲು ಎಲ್ಲ ವಿಷಚಕ್ರಗಳಿಂದ ಹೊರಬಂದು ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ. ಇನ್ನೊಬ್ಬರ ಶ್ರಮವನ್ನು ಕಸಿದು ಜೀವಿಸುವುದನ್ನು ಬಿಟ್ಟು ಆರ್ಥಿಕವಾಗಿ ಸ್ವಾವಲಂಬಿಗಳಾಗಿ, ನಿಮ್ಮನ್ನು ಸಲುಹಿದ ಸಮುದಾಯಕ್ಕೆ ನೀವೊಂದು ಕೊಡುಗೆ ನೀಡುವಂತಾಗಬೇಕು. ಅಲ್ಲಿಂದಲೇ ಸಶಕ್ತ ಕುಟುಂಬ, ಸಮಾಜ ಹಾಗೂ ದೇಶ ನಿರ್ಮಾಣಗೊಳ್ಳುತ್ತದೆ ಅದುವೇ ನಿಜವಾದ ದೇಶ ಸೇವೆ.


ಯುವಕರೇ ಸಾಕಿನ್ನು ಕಗ್ಗತ್ತಲೆಯಿಂದ ಹೊರಬನ್ನಿ…….. ಎಚ್ಚೆತ್ತುಕೊಳ್ಳಿ…… ಜಾಗೃತರಾಗಿರಿ…..

ವಿಶಾಲ ಮನೋಭಾವವನ್ನು  ಬೆಳೆಸಿಕೊಳ್ಳಿ .

ಘಾತಕ ಕೃತ್ಯಗಳನ್ನು ದಿಕ್ಕರಿಸಿ.

ದೇಹ ಉಕ್ಕಿನಂತಿರಲಿ ಆದರೆ ಅದರಲ್ಲಿ ಪ್ರೀತಿ, ಕರುಣೆ, ಸಹಾನುಭೂತಿ, ದೇಶಾಭಿಮಾನ, ದೇಶಭಕ್ತಿ ನೆಲೆಸಿರಲಿ.

ನೈತಿಕ ಮೌಲ್ಯಗಳನ್ನು ಬೆಳೇಸಿಕೊಳ್ಳಿ.

ಸಮಾನತೆ, ವೈಚಾರಿಕತೆ, ಸಹೋದರತೆ ಹಾಗೂ ಸರ್ವ ಧರ್ಮ ಸಮಭಾವದ ಭಾರತ ಕಟ್ಟಲು ಸನ್ನದ್ಧರಾಗಿ.


ಯುವಕರೇ ನೀವು ಬೇರೆಯವರಿಗಾಗಿ ಅಲ್ಲ, ನಿಮಗೋಸ್ಕರ ಒಳ್ಳೆಯರಾಗುವ ಪಣ ತೊಡಿರಿ.


ಇದು ಬುದ್ಧನ ಭಾರತ….

ಬಸವಣ್ಣ, ಅಂಬೇಡ್ಕರರದ್ದು….

ಗಾಂಧೀಜಿ, ಫುಲೆಯವರದ್ದು….

ಸ್ವಾಮಿ ವಿವೇಕಾನಂದರ ಭಾರತ…..


ಇಂಥ ನೂರಾರು ಸಮಾಜ ಸುಧಾರಕರು, ನಿಜವಾದ ದೇಶೋದ್ಧಾರಕರ ಭಾರತದಲ್ಲಿ ನಾನು ಹುಟ್ಟಿದ್ದೇನೆಂಬುದೇ ನನಗೆ ಹೆಮ್ಮೆ.  ಅವರ ವಿಚಾರಗಳನ್ನು ಅನುಸರಿಸಲು ಪ್ರಯತ್ನಿಸೋಣ…… ಅವರ ತತ್ವಗಳನ್ನು ಕಿಂಚಿತ್ತಾದರೂ ಪಾಲಿಸೋಣ……


ಆಕರ ಗ್ರಂಥಗಳು : 

೧)ಸ್ವಾಮಿ ವಿವೇಕಾನಂದ ( ಕುವೆಂಪು)

೨) ವಿವೇಕಾನಂದ 

೩) ಅಂತರ್ಜಾಲ

Friday, January 5, 2024

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ


     

ಶ್ರೀಮತಿ ಉಷಾ ಗೊಬ್ಬೂರ

  




 


ಕ್ರಾಂತಿಜ್ಯೋತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳನ್ನು ಮೆಲುಕು ಹಾಕುವ ಮುನ್ನ......

        ದಿನಾಂಕ: 03/01/2024 ರಂದು ಶ್ರೀ ಮಹಾಶಕ್ತಿ ಮಹಿಳಾ ಒಕ್ಕೂಟ ಸಂಘ (ರಿ) ವಾಡಿ ಇವರ ವತಿಯಿಂದ ಆಯೋಜಿಸಲಾದ ೧೯೩ ನೇ ಸಾವಿತ್ರಿಬಾಯಿ ಫುಲೆಯವರ ಜಯಂತಿಯಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ವಿಷಯಾಂಶ.....

         ಇಂದು ಭಾರತ ದೇಶ ಯಶಸ್ವಿಯಾಗಿ ಮಂಗಳಯಾನ ಹಾಗೂ ಚಂದ್ರಯಾನಗಳನ್ನು ಕೈಗೊಂಡಿದೆ. ಪ್ರಗತಿ ಹೊಂದುತ್ತಿರುವ ದೇಶಗಳ ಪಟ್ಟಿಯಿಂದ ಪ್ರಗತಿ ಹೊಂದಿದ ದೇಶಗಳ ಪಟ್ಟಿಗೆ ದಾಪುಗಾಲಿಡುತ್ತುದೆ. ಈ ಎಲ್ಲ ಸಾಧನೆಗಳ ಜೊತೆಗೆ ಅನೇಕ ಸಮಸ್ಯೆಗಳು ದೇಶದಲ್ಲಿ ಹುಟ್ಟಿಕೊಳ್ಳುತ್ತಿವೆ. ಅದರಲ್ಲಿ ಜಾಗತಿಕ ತಾಪಮಾನ, ನಿಸರ್ಗದ ಮೇಲೆ ಪರಿಣಾಮ, ಪರಿಸರ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಇವೆಲ್ಲವು ಜನರ ಜೀವನದ ಮೇಲೆ ಕೆಟ್ಟ ಪರಿಣಾಮಗಳನ್ನುಂಟು ಮಾಡುತ್ತಿರುವುದು ಆಧುನಿಕ ಯುಗ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾಗಿವೆ.  ಅಷ್ಟೇ ಅಲ್ಲ ಮಾನವನ ಅಂತರಂಗದ ಸೆಲೆಯು ಕೂಡ ಮಲಿನಗೊಂಡು ಸಮಾಜಕ್ಕೆ ಕೆಡುಕಾಗಿ ಪರಿಣಮಿಸುತ್ತಿದೆ. ಇಂದಿನ ಆಧುನಿಕ ಶಿಕ್ಷಣ ವೈಚಾರಿಕ ಜಾಗೃತಿ ಮೂಡಿಸುವ ಬದಲು ಖಾಸಗೀಕರಣಗೊಂಡು ನಗರ ಪ್ರದೇಶಗಳಲ್ಲಿ ಅದೊಂದು ಉದ್ಯಮವಾಗಿ ತಲೆಯೆತ್ತಿದೆ.ಶಿಕ್ಷಣದ ಮೂಲ ಉದ್ದೇಶ ಮರೆಯಾಗುತ್ತಿದೆ. ಸೇವೆಯ ಬದಲು ವ್ಯಾಪಾರವಾಗಿದೆ.

         ಶಿಕ್ಷಣದಿಂದ ಜನರು ಸುಶಿಕ್ಷಿತರಾಗುವ ಬದಲು ಭಾಷೆ, ಧರ್ಮ, ಜಾತಿ, ಉಪಜಾತಿಗಳೆಂಬ ಮಜಲುಗಳನ್ನು ನಿರ್ಮಿಸುತ್ತಿವೆ. ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ, ಸಹಬಾಳ್ವೆ, ಸಹಕಾರ, ಸಹಿಷ್ಣುತೆ, ವಿಶ್ವಬಂಧುತ್ವದ ಪಾಠ ಕಲಿಸುವ ಶಿಕ್ಷಣ ದೊರೆತರಷ್ಟೇ ಶಾಂತಿ ನೆಲೆಸಲಿದೆ. ಈ ಎಲ್ಲಾ ಕಾರಣಗಳಿಂದಲೇ ಜೀವನ ಮೌಲ್ಯಗಳನ್ನು ಬಿತ್ತುವ ಶಿಕ್ಷಕ ವೃತ್ತಿ ಕೇವಲ ಉದ್ಯೋಗವಾಗಿರದೇ ಜವಾಬ್ದಾರಿಯುತ ಕೆಲಸವಾಗಿ ಪರಿಗಣಿಸಲ್ಪಟ್ಟಿದೆ. 

         ಮಕ್ಕಳ ಮೇಲೆ ಪಾಲಕರ “ಔಟ್ ಆಫ್ ಔಟ್” ಅಂಕಗಳನ್ನು ಪಡೆಯಬೇಕೆಂಬ ಅತಿಯಾದ ನಿರೀಕ್ಷೆಯಿಂದ ಓದು ಹೊರೆಯಾಗಿದೆ. ಒಂದು ವೇಳೆ ಮಗು ಹಿಂದುಳಿದರೆ, ಹಿಂಸೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ವಸ್ಥ ಜೀವನಕ್ಕಾಗಿ ಜೀವನ ಮೌಲ್ಯಗಳು ಶಿಕ್ಷಣದಿಂದ ಮಕ್ಕಳಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಕ್ರಮೇಣ ಪ್ರಾಥಮಿಕ ಹಂತದಿಂದ ಉನ್ನತ ಹಂತಕ್ಕೆ ಹೋದಂತೆ ಮಕ್ಕಳು ಕಲಿಕೆಯಿಂದ ಹಿಂದೆ ಸರಿಯುವುದನ್ನು ನಾವು ಕಾಣುತ್ತಿದ್ದೇವೆ. ನಮಗೆ ಸ್ವಾತಂತ್ರ್ಯ ದೊರೆತಾಗ ನಮ್ಮ ದೇಶದ ಸಾಕ್ಷರತಾ ಪ್ರಮಾಣ ಕೇವಲ  16% ಇತ್ತು. ಇಂದಿನ ಭಾರತದ ಸಾಕ್ಷರತಾ ಪ್ರಮಾಣ 74% ಇದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಆದರೂ ಕೂಡ ಸಾಕ್ಷರರಾದವರು ನಿಜಕ್ಕೂ ಸುಶಿಕ್ಷಿತರೇ ? ಎಂಬ ಪ್ರಶ್ನೆ ಕಾಡುತ್ತಿದೆ. 

        ಮಕ್ಕಳ ಮೇಲೆ ಅತ್ಯಾಚಾರ ನಿಲ್ಲುತ್ತಿಲ್ಲ. ಬಾಲ ಅಪರಾಧಿಗಳ ಸಂಖ್ಯೆಯು ಹೆಚ್ಚುತ್ತಿದೆ. ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಕೆಲವು ವಿಚಾರಶೀಲ ವಿದ್ಯಾರ್ಥಿಗಳು ಧ್ವನಿ ಎತ್ತಿದರೆ, ಶಾಶ್ವತವಾಗಿ ಅವರ ಬಾಯಿ ಮುಚ್ಚಿಸಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆಯರ ಬದುಕುವ ಹಕ್ಕು ಹಾಗೂ ಅವಕಾಶಗಳು ಮೊಟಕುಗೊಳ್ಳುತ್ತಿವೆ. ಆಧುನಿಕ ಶಿಕ್ಷಣದಿಂದ ದೊರೆಯಬೇಕಾದ ವಿಶ್ವ ಭಾತೃತ್ವದ ಭಾವದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.

        ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯವಂತ ಸುಂದರ ಸಮಾಜದ ನಿರ್ಮಾಣಕ್ಕಾಗಿ ಫುಲೆ ದಂಪತಿಗಳ ಆದರ್ಶಗಳನ್ನು ಹಾಗೂ ತತ್ವಗಳನ್ನು ಅವರ ದೃಷ್ಟಿಕೋನದಲ್ಲಿಯೇ ಅರಿತುಕೊಂಡು ಆ ಹಾದಿಯಲ್ಲಿ ನಡೆಯುವುದು ಅವಶ್ಯಕವಾಗಿದೆ. ಸಾಕಷ್ಟು ಅಡೆತಡೆಗಳನ್ನು ಹಿಮ್ಮೆಟ್ಟಿ ಹೆಣ್ಣುಮಕ್ಕಳ ಎದೆಯಲ್ಲಿ ಅಕ್ಷರ ಬಿತ್ತಿದ ಮೊದಲ ಮಹಿಳಾ ಶಿಕ್ಷಕಿ, ಮಹಾಮಾತೆ ಸಾವಿತ್ರಿಬಾಯಿ ಫುಲೆ ನಮ್ಮೆಲ್ಲರ ಆದರ್ಶವಾಗಬೇಕಿದೆ. 

         19ನೇ ಶತಮಾನದ ಸಮಾಜದಲ್ಲಿ ಅನೇಕ ಮಹಿಳಾ ವಿರೋಧಿ ಕೆಟ್ಟ ಪದ್ಧತಿಗಳು ತಾಂಡವವಾಡುತ್ತಿದ್ದವು. ಅಕ್ಷರವೆಂಬುದು ಮೇಲ್ಜಾತಿಯವರ ಸ್ವತ್ತಾಗಿತ್ತು. ಮಹಿಳೆ ಕೇವಲ ಮಕ್ಕಳನ್ನು ಹೆರುವ ಯಂತ್ರ, ಮನೆಯವರ ಸೇವೆ ಮಾಡುತ್ತಾ ದಾಸ್ಯದ ಬದುಕಿನಲ್ಲಿಯೇ ತೊಳಲಾಡಬೇಕಿತ್ತು. ಅದೆಷ್ಟು ಮಹಿಳಾ ವಿರೋಧಿ ಆಚರಣೆಗಳು ನಮ್ಮ ದೇಶದಲ್ಲಿ ಇದ್ದವು. ಬಾಲ್ಯ ವಿವಾಹ, ವರದಕ್ಷಿಣೆ, ಕೇಶ ಮುಂಡನ, ಮಹಿಳೆ ಭೋಗದ ವಸ್ತು ಹಾಗೂ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ, ಲೈಂಗಿಕ ಶೋಷಣೆ, ದೇವದಾಸಿ ಪದ್ಧತಿ, ಹೆಣ್ಣುಮಕ್ಕಳೆಂದರೆ ಮನುಷ್ಯರೆಂದು ಪರಿಗಣಿಸಲಾಗದ ವ್ಯವಸ್ಥೆ ಇಂತಹ ಅವಮಾನವೀಯ ಪದ್ಧತಿಗಳು ಜ್ಯೋತಿಬಾ ಮತ್ತು ಸಾವಿತ್ರಿಬಾಯಿ ಅವರನ್ನು ಕಂಗೆಡಿಸಿದ್ದವು. ಇಂತಹ ಕರಾಳ ವ್ಯವಸ್ಥೆ ಹೋಗಲಾಡಿಸಿ,  ಸುಧಾರಣೆಯ ಸಲುವಾಗಿ ಅಕ್ಷರದ ಬೀಜ ಬಿತ್ತಿದ ಮಹಾನ್ ಚೇತನಗಳೆಂದರೆ ಜ್ಯೋತಿಬಾ ಪುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು. ಇವರು ಕೊಳೆತು ನಾರುವ ವ್ಯವಸ್ಥೆಯನ್ನು ಕಿತ್ತೆಸೆದು, ಹೆಣ್ಣುಮಕ್ಕಳ ಜೀವನದಲ್ಲಿ ಜ್ಞಾನದ ಜ್ಯೋತಿ ಬೆಳಗಿಸಿದವರು. ಇದು  ಕೇವಲ ಶಿಕ್ಷಣದಿಂದ ಸಾಧ್ಯ ಎಂದು ಅರಿತು ಮಹಿಳೆಯರಿಗೆ ಶಿಕ್ಷಣ ನೀಡುವ ಮಹಾನ್ ಕಾರ್ಯಕ್ಕೆ ಕೈ ಹಾಕಿದರು. ಇದು ಅಂದು ದೊಡ್ಡ ಸವಾಲಿನ ಕೆಲಸವಾಗಿತ್ತು. ಇವರ ಈ ಕಾರ್ಯಕ್ಕೆ ಅತಿ ದೊಡ್ಡ ನೊಬೆಲ್ ನಂತಹ ಪ್ರಶಸ್ತಿಗಳು ಕೂಡ ಕಡಿಮೆಯೇ. ಅವರ ಈ ದಿಟ್ಟ ಹೆಜ್ಜೆ ಕೆಳವರ್ಗದ ಹಾಗೂ ಮಧ್ಯಮವರ್ಗದ ಸ್ತ್ರೀ-ಪುರುಷರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಸಮಾಜದಲ್ಲಿ ಕ್ರಾಂತಿಯೇ ಉಂಟಾಯಿತು ಎಂದು ಹೇಳಬಹುದು.

          ಅಕ್ಷರದ ದೀವಟಿಗೆ ಹಿಡಿದು ಕತ್ತಲೆಯಲ್ಲಿ ಇದ್ದ ಮಹಿಳೆಯರನ್ನು ಬೆಳಕಿಗೆ ತಂದ ಅಕ್ಷರದವ್ವ ಸಾವಿತ್ರಿಬಾಯಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನಯಾಗಾವನಲ್ಲಿ 1831 ರ ಜನವರಿ 3 ರಂದು ಜನಿಸಿದರು. ಇವರ 9 ನೇ ವಯಸ್ಸಿನಲ್ಲಿ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಜ್ಯೋತಿಬಾ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸಮಾಜದ ಚಿತ್ರಣವನ್ನೇ ಬದಲಿಸುವ ದಿಟ್ಟ ಹೆಜ್ಜೆಯನ್ನು ಸ್ವಂತ ಮನೆಯಿಂದಲೇ ಆರಂಭಿಸಿದರು. ಅಂದರೆ ಪತ್ನಿ ಸಾವಿತ್ರಿಗೆ ತಾವೇ ಮನೆಯಲ್ಲಿ ಸ್ವತಹ ಆರಂಭಿಕ ಶಿಕ್ಷಣ ನೀಡಿದರು. ನಂತರ ಶಿಕ್ಷಕ ತರಬೇತಿಯನ್ನು ಕೊಡಿಸಿದರು. ಈ ರೀತಿ ಅವರು ಮೊಟ್ಟಮೊದಲ ಮಹಿಳಾ ಶಿಕ್ಷಕಿಯಾಗಿ ಅನೇಕ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರು. ಈ ದಂಪತಿಗಳ ಈ ಪಯಣ ಅತ್ಯಂತ ಕಠಿಣವಾಗಿತ್ತು. ಇವರೆಂದು ಎದೆಗುಂದದೆ ದಿಟ್ಟ ಹೆಜ್ಜೆಯನಿಟ್ಟರು. ಯಾರು ಎಷ್ಟೇ ಅಡ್ಡಗಾಲು ಹಾಕಿದರೂ “ತೊಟ್ಟ ಪಣ, ಇಟ್ಟ ಹೆಜ್ಜೆ” ಯಿಂದ ಹಿಮ್ಮೆಟ್ಟಲಿಲ್ಲ. ಕಲ್ಲು, ಸಗಣಿ, ಕೊಳೆತ ಮೊಟ್ಟೆ ಎಸೆದು, ನಿಂದಿಸಿದರೂ , ಅಂಜಿಸಿದರೂ ಅಲುಗಾಡದೆ ದೃಢವಾಗಿ ಎದುರಿಸಿ ಮುನ್ನಡೆದರು ಅಕ್ಷರದವ್ವ ಸಾವಿತ್ರಿಬಾಯಿ. 

"ಜ್ಞಾನ ಇಲ್ಲದಿದ್ದರೆ ಸರ್ವನಾಶ ಆಗುತ್ತೆ,

ವಿವೇಕ ಇಲ್ಲದಿದ್ದರೆ ಆಗ್ತೀವಿ ಪಶುಗಳ ಹಾಗೆ" 

ಎಂದು ಸಾವಿತ್ರಿಬಾಯಿ ತಮ್ಮ ‘ಕಾವ್ಯಫುಲೆ’ ಕವನ ಸಂಕಲನದಲ್ಲಿ ಬರೆದುಕೊಂಡಿದ್ದಾರೆ.ಅಂದರೆ ಸಾಹಿತ್ಯದ ಮೂಲಕವೂ ಶಿಕ್ಷಣದ ಮಹತ್ವ ತಿಳಿಸಿದ್ದಾರೆ.

         ಸಮಾಜಕ್ಕೆ ಇವರ ಕೊಡುಗೆ ಅಪಾರ ಅವುಗಳೆಂದರೆ..... ಹೆಣ್ಣು ಮಕ್ಕಳಿಗಾಗಿ ಶಾಲೆ, ಬಾಲ ಹತ್ಯಾ ನಿವಾರಕ ಕೇಂದ್ರ, ರೈತ ಮತ್ತು ಕಾರ್ಮಿಕರಿಗಾಗಿ ರಾತ್ರಿ ಶಾಲೆಗಳು, ವಿಧವಾ ಪುನರ್ ವಿವಾಹ ಚಳುವಳಿ, ಮನೆಯ ಬಾವಿಯನ್ನು ದಲಿತರಿಗೆ ನೀಡಿದ್ದು, ವಿಧವಾ ಗರ್ಭಿಣಿ ಮಹಿಳೆಯರಿಗೆ ವಸತಿ ನಿಲಯ, ಅನಾಥ ಬಾಲಕಿಯರಿಗೆ ಆಶ್ರಮ, ಸತ್ಯ ಶೋಧಕ ಸಮಾಜದ ಸ್ಥಾಪನೆ ಮಾಡಿದರು. ರೀತಿ ರಿವಾಜು ಮುರಿದು ಸ್ವತಃ ಸಾವಿತ್ರಿ ಪತಿಯ ಚಿತೆಗೆ ಅಗ್ನಿ ಸ್ಪರ್ಶಿಸಿದರು. ಬರಗಾಲಪೀಡಿತ ಜನರ ಸೇವೆ ಮಾಡಿದರು. ಪ್ಲೇಗ್ ರೋಗಿಗಳ ಸೇವೆ, ಹೆಣ್ಣು ಮಕ್ಕಳಿಗೆ ಆಸ್ತಿ ಪಡೆಯುವ ಹಕ್ಕುಗಳಿಗಾಗಿ ಪ್ರತಿಪಾದಿಸಿದರು.  ಹೀಗೆ ಒಂದೇ ಎರಡೇ ಜೀವಿತ ಅವಧಿವರೆಗೆ ಅನೇಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದರು. ಇಂದು ನಾವೆಲ್ಲ ಹೆಣ್ಣು ಮಕ್ಕಳು ಶಿಕ್ಷಿತರಾಗಿ ಉನ್ನತ ಸ್ಥಾನದಲ್ಲಿ ಇದ್ದೇವೆ ಎಂದರೆ ಅದು ಅವರ ಅತ್ಯಮೂಲ್ಯ ಕೊಡುಗೆಗಳಿಂದಲೇ ಎಂದು ಎದೆ ತಟ್ಟಿ ಹೇಳಬಹುದು. ಅದೆಲ್ಲವನ್ನು ಸ್ಮರಿಸುತ್ತ ಇಂದು ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ. 

ನಿನ್ನ ಜೀವನ ಕುರಿತು ಅದೆಷ್ಟೋ ಪುಸ್ತಕ ಬರೆದಿದ್ದೇವೆ ಅವ್ವ

ಹೊಗಳುತ್ತ ಸಾವಿರಾರು ಕವನ ಕಟ್ಟಿದ್ದೇವೆ ಅವ್ವ

ತಿಂಗಳುಗಟ್ಟಲೇ ಸಭೆ ಸಮಾರಂಭ ಮಾಡುತ್ತಿದ್ದೇವೆ ಅವ್ವ

ನಿನ್ನ ಸಾಧನೆಗಳನ್ನು ಹಾಡಿ ಹೊಗಳುತ್ತಿದ್ದೇವೆ ಅವ್ವ

ಮಕ್ಕಳಿಗೆ ನಿನ್ನ ವೇಷ ಹಾಕಿಸಿ ಖುಷಿ ಪಡುತ್ತಿದ್ದೇವೆ ಅವ್ವ

ನಿನ್ನ ಹೆಸರಲ್ಲಿ ಸಾಧಕಿಯರಿಗೆ ಪ್ರಶಸ್ತಿ ನೀಡುತ್ತಿದ್ದೇವೆ ಅವ್ವ

ಒಗ್ಗಟ್ಟಾಗಿ ಸಂಘಟಿಸಿ ನಿನ್ನ ಹಾದಿ ತುಳಿಯುತ್ತಿದ್ದೇವೆ ಅವ್ವ

ಇಷ್ಟಾದರೂ ಹೆಣ್ಣಿನ ಶೋಷಣೆ , ಅತ್ಯಾಚಾರ , ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬಾಲ್ಯ ವಿವಾಹ, ಭೋಗಿಸುವುದು ನಿಲ್ಲುತ್ತಿಲ್ಲವಲ್ಲ ಅವ್ವ………

        ಪ್ರತಿದಿನ ಪತ್ರಿಕೆಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೇ ದೌರ್ಜನ್ಯ, ಮಹಿಳೆಯರ ಕೊಲೆ, ಮಗುವಿನ ಮೇಲೆ ಅತ್ಯಾಚಾರ, ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಒಂದಲ್ಲೊಂದು ಘಟನೆಗಳು ಇದ್ದೇ ಇರುತ್ತವೆ. ವಿಕೃತ, ಪೈಶಾಚಿಕ ವಿಷಜಂತುಗಳು ಮಗು ಎಂಬುದನ್ನು ಲೆಕ್ಕಿಸದೆ ಹೊಸಕಿ ಹಾಕುತ್ತಿವೆ. ಗಂಡಸಿನ ಕಾಮ ತೃಷೆಯಾಗಿರಲಿ, ಜನಾಂಗೀಯ ಗಲಭೆಗಳಾಗಿರಲಿ ಬಲಿಯಾಗುತ್ತಿರುವುದು ಮಾತ್ರ ಅಮಾಯಕ ಹೆಣ್ಣು ಮಕ್ಕಳು. 

         ಇತ್ತೀಚಿನ ಹಸಿಹಸಿ ಮನ ಕಲುಕುವ ಘಟನೆಗಳಾದ ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ಕಿರುಕುಳ, ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ವಸತಿ ಶಾಲೆಯಲ್ಲಿರುವ ಮಕ್ಕಳ ಮೇಲಿನ ಅತ್ಯಾಚಾರ, 12 ವರ್ಷದ ಬಾಲಕಿ ಹರಿದ ರಕ್ತ ಸಿಕ್ತ ಬಟ್ಟೆಯೊಂದಿಗೆ ನಡು ರಸ್ತೆಯಲ್ಲಿ ಪತ್ತೆಯಾಗಿದ್ದು, ನಮ್ಮ ಪಕ್ಕದ ತಾಲೂಕಿನಲ್ಲಿಯೇ ಅಪ್ರಾಪ್ತ ಶಾಲಾ ಬಾಲಕಿಯರನ್ನು ಅತ್ಯಾಚಾರಗೈದು ಕೊಲೆ ಪ್ರಕರಣ, ಬಾಲ್ಯವಿವಾಹ, ವರದಕ್ಷಿಣೆ, ಪಿತೃ ಪ್ರಧಾನ ವ್ಯವಸ್ಥೆಯಿಂದಾಗಿ ದಿನಂಪ್ರತಿ ಗಂಡನಿಂದ ಹೆಂಡತಿ ಮೇಲಾಗುವ ದೌರ್ಜನ್ಯ ಹಾಗೂ ಹಿಂಸೆ ಇವೆಲ್ಲವು ಆಧುನಿಕ  ಭಾರತದ ಲಕ್ಷಣಗಳೇ ? ನಾವೆಲ್ಲ ನಿಜಕ್ಕೂ ಸುಶಿಕ್ಷಿತರೇ ? ವೈಚಾರಿಕತೆ ಉಳ್ಳವರೇ ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ.

          2012- 2022 ರ ವರೆಗೆ ಹತ್ತು ವರ್ಷಗಳಲ್ಲಿ 3,59,247 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ 30,000 ಕ್ಕೂ ಅಧಿಕ ಅದರಂತೆ ಪ್ರತಿದಿನ 87 ಅತ್ಯಾಚಾರ ಪ್ರಕರಣಗಳು, ಪ್ರತಿ ಗಂಟೆಗೆ ಸರಾಸರಿ 4 ಅತ್ಯಾಚಾರಗಳು, ಪ್ರತಿ ಎರಡು ನಿಮಿಷಕ್ಕೊಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಈ ಎಲ್ಲ ದೌರ್ಜನ್ಯಗಳನ್ನು ತಡೆಯೊದಕ್ಕೆ ಕಾನೂನು ಎಷ್ಟು ಮುಖ್ಯವೋ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿರೋದು ಅಷ್ಟೇ ಮುಖ್ಯ. ಪೋಷಕರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಅವಳು ಭೋಗದ ವಸ್ತುವಲ್ಲ, ಅಮಲಿನ ಪದಾರ್ಥ ಕೂಡ ಅಲ್ಲವೆಂಬ ಸಂಸ್ಕಾರ ನೀಡಬೇಕಿದೆ. ವಿಕೃತ ಮನಸ್ಥಿತಿಗಳು ಬದಲಾಗಬೇಕಿದೆ. ಭಾರತವನ್ನು ಮಹಿಳೆಯರ ಪಾಲಿಗೆ ವಿಶ್ವದಲ್ಲೇ ಅಪಾಯಕಾರಿ ದೇಶವೆಂದು ಗುರುತಿಸಲಾಗುತ್ತಿದೆ. ಮಹಿಳಾ ಸಬಲೀಕರಣವೆನ್ನುವುದು ಮುಖವಾಡವಾಗಿದೆ. ಇಷ್ಟೆಲ್ಲ ಅಪರಾಧಗಳು ನಡೆಯುತ್ತಿವೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಮಾತ್ರ ಆಗುತ್ತಿಲ್ಲ, ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿ, ಜೈಲಿನಿಂದ ಹೊರ ಬಂದ ಮೇಲೆ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. 

         ಇತ್ತೀಚೆಗೆ ಅನೇಕ ಮಹಿಳಾ ಸ್ವ ಸಹಾಯ ಸಂಘಗಳು ಸ್ಥಾಪಿತಗೊಂಡಿವೆ. ಇದರಲ್ಲಿರುವ ಮಹಿಳಾ ಸದಸ್ಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರೊಂದಿಗೆ ಕುಟುಂಬ ನಿರ್ವಹಣೆ, ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಧನ ಸಹಾಯದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರಿವುದು ಸಂತಸದ ಸಂಗತಿ. ಅದಕ್ಕೆ ಹಲವಾರು ಪುರುಷರು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುತ್ತ ಬೆಂಬಲ ಕೂಡ ನೀಡುತ್ತಿರುವುದು ಮಹಿಳೆಯರ ಬಲ ಹೆಚ್ಚಿದಂತಾಗಿದೆ. ಕೆಲವು ಸಂಘ, ಸಂಸ್ಥೆಗಳು ಅಮಾನುಷ ಘಟನೆಗಳ ವಿರುದ್ಧ ಹೋರಾಟ ಮಾಡುತ್ತಲೇ ಇವೆ. ಆದರೆ ಕೆಲವರಲ್ಲಿರುವ ಗಂಡು ಮೇಲೆಂಬ ರೋಗಗ್ರಸ್ಥ ಸಮಾಜದಲ್ಲಿ ಹೆಣ್ಣು ಇಂದಿಗೂ ಭೋಗದ ವಸ್ತುವಾಗಿಯೇ ಉಳಿದುಕೊಂಡಿದ್ದಾಳೆ. ವಿವಿಧ ರಂಗಗಳಲ್ಲಿ ದಾಪುಗಾಲಿಡುತ್ತಿರುವ ಆಧುನಿಕ ಮಹಿಳೆ ಎಂದೆನಿಸಿಕೊಂಡರೂ, ತಮ್ಮ ಮೇಲಾಗುವ ಶೋಷಣೆಗಳ ವಿರುದ್ಧ ಧ್ವನಿ ಎತ್ತದಿರುವುದು, ವಿಪರ್ಯಾಸವೇ ಸರಿ. ಕೌಟುಂಬಿಕ ಜೀವನದಲ್ಲಿ ಅದೆಷ್ಟೋ ಮಹಿಳೆಯರು ತಮ್ಮ ಮೇಲಾಗುವ  ಹಿಂಸೆ ಹಾಗೂ ದೌರ್ಜನ್ಯಗಳನ್ನು ಸಹಿಸುತ್ತಿರುವುದು,   ಕಣ್ಣಿದ್ದು ಕುರುಡಾದಂತಾಗಿದೆ. ತನ್ನ ನೆಮ್ಮದಿಯ ಜೀವನ, ಸುಂದರ ಬದುಕಿಗಾಗಿ ಎಲ್ಲಿಯವರೆಗೆ ಸ್ವತಃ ದಿಟ್ಟತನದ ಹೆಜ್ಜೆ ಇಡುವುದಿಲ್ಲವೋ ಅಲ್ಲಿಯವರೆಗೆ ಸಮಾನತೆಯನ್ನು ಕಾಣಲು ಸಾಧ್ಯವಿಲ್ಲ.

         ಎಷ್ಟೇ ಕಠಿಣ  ಕಾನೂನು ತಂದರೂ ಕೂಡ ಬಾಹ್ಯವಾಗಿ ನಿಯಂತ್ರಣ ಹೇರುವುದಕ್ಕಿಂತ ಆಂತರಿಕವಾಗಿ ಗಂಡಿನ ಮನಸ್ಥಿತಿಗಳು ಬದಲಾಗಬೇಕು. ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸಿ ಗೌರವಿಸುವಂತಾಗಬೇಕು. ಜಿಡ್ಡುಗಟ್ಟಿದ ಪುರುಷ ಪ್ರಧಾನತೆಯ ಸಮಾಜ ನಶಿಸಿ, ಸಮಾನತೆಯ ಬೀಜ ಬೆಳೆದು ಹೆಮ್ಮರವಾಗಬೇಕು. ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಬೇಕು. ಅದು ಸಾಧ್ಯವಾಗುವುದು ನಮ್ಮಿಂದಲೇ……

          ಇತ್ತೀಚೆಗೆ ನಾವು ನಾಯಿಕೊಡೆಯಂತೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿರುವ ಸಂಘ ಸಂಸ್ಥೆಗಳನ್ನು ಕಾಣುತ್ತಿದ್ದೇವೆ. ಅದರಲ್ಲಿ ಬಹುತೇಕವುಗಳು ಸಭೆ, ಸಮಾರಂಭ, ಶಾಲು, ಹಾರ, ಪ್ರಶಸ್ತಿಗಳಿಗಷ್ಟೇ ಜೋತು ಬಿದ್ದಿರುವುದು ನೋವಿನ ಸಂಗತಿ. ಸೋಶಿಯಲ್ ಮೀಡಿಯಾಗಳಲ್ಲಿ ಪದಾಧಿಕಾರಿಗಳಿರುವ ಬ್ಯಾನರ್ ಹಾಕಿಕೊಂಡು ಶುಭ ಕೋರುವುದು ಇವೆಲ್ಲ ತೋರಿಕೆಯ ಮುಖವಾಡ ಹೊತ್ತು ತಿರುಗುತ್ತಿವೆ. ಆದರೆ ಇತ್ತೀಚೆಗೆ ಹುಟ್ಟಿರುವ ಸಾವಿತ್ರಿಬಾಯಿ ಫುಲೆ ಸಂಘವು ಅದನ್ನೆಲ್ಲ ಮೀರಿಸಿ ಸಮಾಜದಲ್ಲಿರುವ ಮಹಿಳೆಯರ ಒಳಿತಿಗಾಗಿ ಸಾಕಷ್ಟು ಶ್ರಮಿಸುತ್ತ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾಪರ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳಾದ ಜಾಥಾ, ಬೀದಿ ನಾಟಕ, ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಅದರಂತೆ ಮಹಿಳಾಪರ ಕಾನೂನುಗಳ ತಿಳುವಳಿಕೆ ನೀಡುವುದು, ಇವುಗಳನ್ನು ಹಮ್ಮಿಕೊಂಡು ಮಹಿಳಾ ಸಬಲೀಕರಣ ಮಾಡುವುದರಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿ ಎಂದು ಆಶಿಸುವೆ………




ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS