Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Monday, August 5, 2024

ವಿಶ್ವ ಸ್ತನ್ಯಪಾನ ಸಪ್ತಾಹ

 


ಅಮೃತಪಾನ ಎದೆಹಾಲು


ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ

ನಾಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ |

ನೀ ಕೇಳಿದಾಗ ಕೊಡುವೇನು ||

ಈ ಜನಪದದ ಸಾಲುಗಳಲ್ಲಿ ಕಂದನ ಮೇಲಿರುವ ಅಮ್ಮನ ಅಗಾಧ ಪ್ರೀತಿ ಅಡಗಿದೆ. ಮಗುವಿನ ಜೀವನದಲ್ಲಿ ಬೇರೆ ಯಾರಿಂದಲೂ ತುಂಬಲಸಾಧ್ಯವಾದ ಸ್ಥಾನ ಎಂದರೆ, ಅದು ತಾಯಿಯದ್ದು. ವಿಶೇಷವಾದ ಭಾವನಾತ್ಮಕ ಬೆಸುಗೆ ತಾಯಿ ಮತ್ತು ಮಗುವಿನ ಮಧ್ಯೆ ಇರುತ್ತದೆ. ಕಾಣದ ಭ್ರೂಣದಿಂದ ಆರಂಭವಾಗುವ ಈ ಭಾಂದವ್ಯ ತಾಯಿಯಲ್ಲಿ ಮಗುವಿನ ಬಗೆಗೆ ಪ್ರೀತಿ, ಮಮತೆ, ವಾತ್ಸಲ್ಯ, ಕಾಳಜಿಗಳು ಭ್ರೂಣವು ಬೆಳದಂತೆ ಅದರ ಜೊತೆಗೇ ಬೆಳೆಯುತ್ತ ಹೋಗುತ್ತದೆ. ಶೈಶವಾವಸ್ಥೆಯಲ್ಲಿ ಮಗುವಿಗೆ ತಾಯಿಯ ಆರೈಕೆ ಅತ್ಯವಶ್ಯಕ.

ದಿನನಿತ್ಯದ ಕೆಲಸದ ಭರಾಟೆ, ಆಧುನಿಕ ಜೀವನ ಶೈಲಿ, ಸ್ತನ್ಯಪಾನದ ಬಗ್ಗೆ ಸೂಕ್ತ ಅರಿವಿಲ್ಲದಿರುವುದರಿಂದ ಮಗುವಿಗೆ ಸ್ತನ್ಯಪಾನದ ಕೊರತೆಯುಂಟಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಎದುರಾಗುತ್ತಿರುವ ದೊಡ್ಡ ಸಮಸ್ಯೆಯಾಗಿದೆ.

“ಮಕ್ಕಳ ಹಕ್ಕುಗಳ ಸಮಾವೇಶ”ದ ಪ್ರಕಾರ ಪ್ರತಿ ಮಗುವಿಗೆ ಉತ್ತಮ ಪೋಷಣೆಯ ಹಕ್ಕಿದೆ. ಬಾಲ್ಯದಲ್ಲಿ ಅಪೌಷ್ಟಿಕತೆಯಿಂದಾಗುವ ಮಕ್ಕಳ ಸಾವುಗಳ ವರದಿಯಾಗುತ್ತಲೇ ಇವೆ. ಐದು ವರ್ಷದೊಳಗಿನ ಮಿಲಿಯನ್‌ಗಟ್ಟಲೆ ಮಕ್ಕಳ ಬೆಳವಣಿಗೆ ಕುಂಠಿತವಾಗಿ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. WHO ನ 20 ಡಿಸೆಂಬರ್ 2023ರ ವರದಿಯ ಪ್ರಕಾರ ಅಪೌಷ್ಟಿಕತೆಯಿಂದ ಜಾಗತಿಕವಾಗಿ ವರ್ಷಕ್ಕೆ 2.7 ಮಿಲಿಯನ್ ಮಕ್ಕಳ ಸಾವು ಸಂಭವಿಸುತ್ತಿದೆ ಎಂಬ ಅಂದಾಜಿದೆ. ಮಗುವಿನ ಮೊದಲ ಎರಡು ವರ್ಷಗಳು ಅತ್ಯಂತ ನಿರ್ಣಾಯಕವಾಗಿವೆ. ವಿಶೇಷವಾಗಿ ಮೊದಲ ಆರು ತಿಂಗಳುಗಳು ತಾಯಿಯ ಎದೆಹಾಲುಣಿಸುವಿಕೆ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ.

ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಬೇಕು. ಮಗುವಿನ ಮೊದಲ ಆರು ತಿಂಗಳುಗಳು ಯಾವುದೇ ಬಾಹ್ಯ ಆಹಾರ ನೀಡದೇ ಕೇವಲ ತಾಯಿಯ ಎದೆಹಾಲನ್ನು ಮಾತ್ರ ಕೊಡಬೇಕು. ಎರಡು ವರ್ಷಗಳು ಇಲ್ಲವೇ ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಹಾಲುಣಿಸುವಿಕೆಯನ್ನು ಮುಂದುವರಿಸಬೇಕೆಂದು WHO ಹಾಗೂ UNICEF ಶಿಫಾರಸು ಮಾಡುತ್ತವೆ. ಅನೇಕ ಶಿಶುಗಳಿಗೆ ಮತ್ತು ಮಕ್ಕಳಿಗೆ ಸೂಕ್ತ ಆಹಾರ ದೊರಕುತ್ತಿಲ್ಲ. 2015 - 2020 ರ ಅವಧಿಯಲ್ಲಿ 0-6 ತಿಂಗಳ ವಯಸ್ಸಿನ ಸುಮಾರು 44%  ಶಿಶುಗಳು ಮಾತ್ರ ತಾಯಿಯ ಎದೆಹಾಲು ಸೇವಿಸಿದ್ದಾರೆಂದು ವರದಿಯಾಗಿದೆ.

ಇಂದಿಗೂ ನಮ್ಮ ದೇಶದ ಹಳ್ಳಿಗಳಲ್ಲಿ ಮಗು ಜನಿಸಿದ ನಂತರ….

ಹುಟ್ಟಿದ ಮಗುವಿಗೆ ಜೇನುತುಪ್ಪ ಕೊಡಲಾಗುತ್ತದೆ. 12 ತಿಂಗಳ ಒಳಗಿನ ಶಿಶುವಿಗೆ ಹಸುವಿನ ಹಾಲು ಕುಡಿಸಲಾಗುತ್ತದೆ. ಕೆಲವು ಹಣ್ಣಿನ ರಸಗಳನ್ನು ನೀಡಲಾಗುತ್ತದೆ. ಬಾದಾಮಿ ಒಣ ಖರ್ಜೂರವನ್ನು ತೇಯ್ದು ನೆಕ್ಕಿಸಲಾಗುತ್ತದೆ. ಸ್ವಲ್ಪ -ಸ್ವಲ್ಪ ನೀರು ಕೂಡ ಕುಡಿಸಲಾಗುತ್ತದೆ.

ಇವೆಲ್ಲವೂ ಶಿಶುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರೊಂದಿಗೆ ಆರು ತಿಂಗಳ ಒಳಗೆ ನಮ್ಮ ಮಕ್ಕಳು ತಾಯಿಯ ಎದೆಹಾಲು ಉಣಿಸುವಿಕೆಯಿಂದ ವಂಚಿತರಾಗುತ್ತಿರುವುದಕ್ಕೂ ಕೆಲವು ಕಾರಣಗಳಿವೆ.

ತಾಯಿಯ ಆಧುನಿಕ ಜೀವನ ಶೈಲಿ. ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಮಹಿಳೆಯರು. ಕೆಲಸದ ಒತ್ತಡಗಳಲ್ಲಿ ಮಗುವಿನ ಬಗ್ಗೆ ಸೂಕ್ತ ಕಾಳಜಿವಹಿಸಲು ಅವಕಾಶ ದೊರೆಯದೆ ಇರುವುದು. ಕೆಲವು ಮಹಿಳೆಯರಲ್ಲಿರುವ ಅತಿಯಾದ ಸೌಂದರ್ಯ ಪ್ರಜ್ಞೆ. ಆಧುನಿಕ ಆಹಾರ ಪದ್ಧತಿ ಹಾಗೂ ಜಂಕ್ ಫುಡ್ಗಳ ಸೇವನೆಯಿಂದ ಎದೆಹಾಲಿನ ಕೊರತೆ. ಪ್ರಸವ ಸಂದರ್ಭದಲ್ಲಿನ ತಾಯಿಯ ಮರಣ. ಶಸ್ತ್ರಚಿಕಿತ್ಸೆಯಿಂದ ಹಾಗೂ ಕಡಿಮೆ ತೂಕ ಹೊಂದಿರುವ ಶಿಶುಗಳ ವೆಂಟಿಲೇಟರ್‌ನಲ್ಲಿ ಆರೈಕೆ ಮಾಡುವುದು. ಎದೆಹಾಲು ಹೆಚ್ಚಿಸುವ ಆಹಾರ ಸೇವಿಸುವುದರ ಕುರಿತಾದ ತಿಳುವಳಿಕೆಯ ಕೊರತೆ. ಸಾರ್ವಜನಿಕ ಸ್ಥಳಗಳಲ್ಲಿ ಎದೆ ಹಾಲುಣಿಸಲು ಸೂಕ್ತ ಸ್ಥಳಾವಕಾಶ ಇಲ್ಲದಿರುವುದು.

ತಾಯಿಯ ಎದೆಹಾಲು, ಶಿಶುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಇದು ತಾಯಿ ಮತ್ತು ಮಗುವಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ನೈಸರ್ಗಿಕವಾದ ಅಗತ್ಯ ಕ್ರಿಯೆಯಾಗಿದೆ.

ಸ್ತನ್ಯಪಾನದಿಂದ ಮಗುವಿಗೆ ಆಗುವ ಪ್ರಯೋಜನಗಳು.

ಎದೆಹಾಲು ಶಿಶುಗಳಿಗೆ ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು, ಖನಿಜಗಳು ಹಾಗೂ ಪ್ರೋಟೀನ್ ಗಳನ್ನು ಒದಗಿಸುತ್ತದೆ. ರೋಗಗಳಿಂದ ರಕ್ಷಣೆ ಹಾಗೂ ಪ್ರತಿರಕ್ಷಣಾ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮೆದುಳಿನ ಬೆಳವಣಿಗೆ ಹಾಗೂ ಸ್ಮರಣ ಶಕ್ತಿ ಸುಧಾರಿಸಲು ಸಹಾಯಕವಾಗುತ್ತದೆ. ಚರ್ಮದಿಂದ ಚರ್ಮದ ಸಂಪರ್ಕ ಮತ್ತು ಹಾಲುಣಿಸುವ ದೈಹಿಕ ನಿಕಟತೆಯಿಂದ ತಾಯಿ ಮತ್ತು ಮಗುವಿನ ಬಂಧವನ್ನು ಉತ್ತೇಜಿಸುತ್ತದೆ. ಅತಿಸಾರ, ನ್ಯೂಮೋನಿಯ, ಕಿವಿ ಸೋಂಕು, ಹಿಮೋಫಿಲಸ್, ಇನ್ ಫ್ಲೋಯೆಂಜಾ ಮತ್ತು ತೀವ್ರವಾದ ಸೋಂಕಿನಿಂದ ರಕ್ಷಿಸುತ್ತದೆ. ಬುದ್ಧಿಮತ್ತೆ ಚುರುಕಾಗುತ್ತದೆ. ಹೆಚ್ಚಿನ ತೂಕ,  ಬೊಜ್ಜಿನ  ನಿಯಂತ್ರಣ ಹಾಗೂ ವಯಸ್ಕ ಜೀವನದಲ್ಲಿ ಮಧುಮೇಹ ಉಂಟಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ.

ಸ್ತನ್ಯಪಾನದಿಂದ ತಾಯಿಗೆ ಆಗುವ ಪ್ರಯೋಜನಗಳು.

ಸ್ತನ್ಯಪಾನವು ಪ್ರಸವ ನಂತರದ ತೂಕ ನಷ್ಟಕ್ಕೆ ಸಹಾಯಮಾಡುತ್ತದೆ.ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ. ಗರ್ಭಾಶಯವು ಅದರ ಪೂರ್ವ ಗರ್ಭಧಾರಣೆಯ ಗಾತ್ರಕ್ಕೆ ಮರಳಲು ಸಹಾಯ ಮಾಡುತ್ತದೆ. ಎದೆಹಾಲು ಯಾವಾಗಲೂ ಲಭ್ಯವಿರುತ್ತದೆ ಮತ್ತು ಸರಿಯಾದ ತಾಪಮಾನದಲ್ಲಿರುತ್ತದೆ.  ಸ್ತನ್ಯಪಾನ ಜನನ ನಿಯಂತ್ರಣದ ನೈಸರ್ಗಿಕ ವಿಧಾನವಾಗಿದೆ. ಭಾವನಾತ್ಮಕ ಒತ್ತಡವನ್ನು ನಿವಾರಿಸುತ್ತದೆ. 

  ಇನ್ನೂ ಅನೇಕ ಪ್ರಯೋಜನಗಳು ಸ್ತನ್ಯಪಾನದಿಂದ ತಾಯಿ ಹಾಗೂ ಮಗುವಿಗೆ ಉಂಟಾಗುತ್ತವೆ.

ಯಶಸ್ವಿ ಸ್ತನ್ಯಪಾನಕ್ಕೆ ಇರುವಂತಹ ಪ್ರಮುಖ ಅಂಶಗಳು.

ಹುಟ್ಟಿದ ತಕ್ಷಣ ಮೊದಲ ಗಂಟೆಯೊಳಗೆ ತನ್ನಪಾನವನ್ನು ಪ್ರಾರಂಭಿಸುವುದು. ಮಗು ಬಯಸಿದಷ್ಟು ಹಗಲು ರಾತ್ರಿ ಬೇಡಿಕೆ ಮೇರೆಗೆ ಸ್ತನ್ಯಪಾನ ಮಾಡಿಸುವುದು. ತಾಯಿ ಮತ್ತು ಶಿಶು ಸತತ ಒಟ್ಟಿಗೆ ಇರಲು ಅನುವು ಮಾಡಿಕೊಡುವುದು.  ವೈದ್ಯಕೀಯ ಶಿಫಾರಸ್ಸಿನ ಹೊರತು ಶಿಶುಗಳಿಗೆ ಹೆಚ್ಚುವರಿ ಆಹಾರ, ಪಾನೀಯ ಇಲ್ಲವೇ ನೀರು ಕೊಡದಿರುವುದು.

ದರ ಮಹತ್ವವನ್ನು ಅರಿತು ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಸರ್ಕಾರದ ನೀತಿ  ನಿರೂಪಕರು, WHO, UNICEF ಹಾಗೂ ಇತರೆ ಸಂಸ್ಥೆಗಳು ಶ್ರಮಿಸುತ್ತಿವೆ. ಪ್ರಪಂಚದಾದ್ಯಂತ ಶಿಶುಗಳ ಆರೋಗ್ಯವನ್ನು ಸುಧಾರಿಸಲು ವಾರ್ಷಿಕವಾಗಿ ಆಗಸ್ಟ್ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ವಾರವನ್ನು ಆಚರಿಸಲಾಗುತ್ತದೆ. ಪ್ರಸ್ತುತ 170ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. ಇದರಲ್ಲಿ ನಮ್ಮೆಲ್ಲರ ಪಾತ್ರ ಕೂಡ ಮಹತ್ವದ್ದು.

ಬ್ಯಾಕ್ಟೀರಿಯಮ್ ಅಥವಾ ಎದೆಹಾಲು ಬ್ಯಾಂಕ್ ನಲ್ಲಿ ಮಾನವ ಹಾಲನ್ನು ಸಂಗ್ರಹಿಸಲಾಗುತ್ತದೆ. ಹಾಲನ್ನು ಕೆಡದಂತೆ ಪ್ರಕ್ರಿಯೆಗೊಳಿಸಿ, ಪಾಶ್ಚರೀಕರಿಸಿ, ವಿತರಿಸುವ ಸೇವೆಯನ್ನು ಈ ಎದೆಹಾಲು ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ತಾಯಿಯ ಹೊರತಾಗಿ ಬೇರೆ ಮಹಿಳೆಯಿಂದ ಸರಬರಾಜು ಮಾಡಲ್ಪಟ್ಟ ಎದೆಹಾಲು ಬಳಸುವುದರಿಂದ ದಾನಿ ತಾಯಿಯಿಂದ ಮಗುವಿಗೆ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳು ಹರಡದಂತೆ ಕಾಳಜಿ ವಹಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾನವ ಹಾಲಿನ ಬ್ಯಾಂಕುಗಳ ಬೇಡಿಕೆ ಮತ್ತು ಬಳಕೆ ಹೆಚ್ಚುತ್ತಿದೆ.

ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಮಾನವ ಹಾಲಿನ ಬ್ಯಾಂಕುಗಳು ಸ್ಥಾಪಿತಗೊಂಡಿವೆ. 1985 ರಲ್ಲಿ ಮೊದಲ ಹಾಲಿನ ಬ್ಯಾಂಕ್ ಸ್ಥಾಪಿತವಾಯಿತು. ಏಷ್ಯಾದ ಮೊದಲ ಹಾಲಿನ ಬ್ಯಾಂಕನ್ನು 1989ರಲ್ಲಿ ಭಾರತದ ಮುಂಬೈನ ಸಿಯಾನ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಯಿತು. ಹಾಲಿನ ಕೊರತೆ ಅನುಭವಿಸುತ್ತಿರುವ ತಾಯಂದಿರು ಇಂತಹ ಬ್ಯಾಂಕುಗಳ ಮೂಲಕ ದಾನಿ ತಾಯಂದಿರ ಹಾಲನ್ನು ತಮ್ಮ ಮಗುವಿಗಾಗಿ ಪಡೆಯುತ್ತಿದ್ದಾರೆ. ಇದರಿಂದ ಹಾಲಿನ ಕೊರತೆಯುಂಟಾಗಿ, ಅಪೌಷ್ಟಿಕತೆಯಿಂದ ಸಂಭವಿಸುವ ಶಿಶುಗಳ ಸಾವಿನ ಪ್ರಮಾಣ ಕಡಿಮೆಯಾಗಿದೆ.

ಜುಲೈ 30, 2024 ರಂದು ವೈನಾಡ್ ಭೂಕುಸಿತ ದುರಂತ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಎದೆ ಹಾಲು ಬೇಕಿದ್ದರೆ ತಿಳಿಸಿ, ನನ್ನ ಪತ್ನಿ ಸಿದ್ದಳಿದ್ದಾಳೆ. ಎಂಬ ಪೋಸ್ಟ್ ಎಲ್ಲೆಡೆ ವೈರಲ್ ಆಗಿತ್ತು. ಇಂತಹ ವಿಭಿನ್ನವಾದ ಮಾನವೀಯತೆ ಮೆರೆಯುವ ಮನವಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದ್ದು ಇದೇ ಮೊದಲೇನಲ್ಲ. ಈ ಸಂದೇಶವನ್ನು ಮಲಯಾಳಂನಲ್ಲಿ ಕಳುಹಿಸಲಾಗಿದ್ದು ಕಳುಹಿಸಿದ ವ್ಯಕ್ತಿಯ ವಿವರ ಎಲ್ಲೂ ಲಭ್ಯವಾಗಿಲ್ಲ ಆದರೂ ಆ ವ್ಯಕ್ತಿ ಹಾಗೂ ಆತನ ಪತ್ನಿ ಸಂದೇಶ ಹಲವಾರು ಮಂದಿಯ ಹೃದಯ ತಲುಪಿದ್ದಂತೂ ನಿಜ.

ಆರೋಗ್ಯವಂತ ಮಕ್ಕಳು ನಮ್ಮ ದೇಶದ ಸಂಪತ್ತು. ಇಂತಹ ಮಕ್ಕಳಿಂದ ಎಲ್ಲಾ ರೀತಿಯ ಪ್ರಗತಿ ನಿರೀಕ್ಷಿಸಲು ಸಾಧ್ಯ. ಉತ್ತಮ ಸಮಾಜ, ದೇಶ ಹಾಗೂ ವಿಶ್ವಕ್ಕಾಗಿ ಸ್ತನ್ಯಪಾನವನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಪ್ರತಿಯೊಬ್ಬರು ಕಾಳಜಿ ವಹಿಸಲೇಬೇಕು.

ಉಷಾ ಗೊಬ್ಬೂರ

ಕಲಬುರಗಿ

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS