Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Monday, July 15, 2024

ಚಿಂಕಿ-ಮಿಂಕಿ

 ಚಿಂಕಿ - ಮಿಂಕಿ


ಅಮ್ಮ ಚಿಂಕಿ - ಮಿಂಕಿ ಇಬ್ಬರನ್ನು ದಿನಾಲು ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಎಬ್ಬಿಸಿ ಶಾಲೆಗೆ ಹೋಗಲು ರೆಡಿ ಮಾಡುತ್ತಿದ್ದರು‌. 9 ಗಂಟೆಗೆ ಸರಿಯಾಗಿ ಹಾನ್೯ ಸದ್ದು ಮಾಡುತ್ತ ಮನೆ ಬಾಗಿಲಿಗೆ ಶಾಲೆಯ ವ್ಯಾನ್ ಬಂದು ಅವರಿಬ್ಬರನ್ನು ಕರೆದೊಯ್ಯುತ್ತಿತ್ತು. ಶಾಲೆಯಲ್ಲಿ ಮಿಸ್ ಹೇಳಿಕೊಡುವ ಆಟ - ಪಾಠದ ನಂತರ ಮಣಭಾರದ ಬ್ಯಾಗ ಹೊತ್ತು ಚಿಂಕಿ-ಮಿಂಕಿಯರನ್ನು ಸಂಜೆ ಹೊತ್ತಿಗೆ ವ್ಯಾನ್ ಮತ್ತೆ ಮನೆ ಬಾಗಿಲಿಗೆ ತಂದುಬಿಡುತ್ತಿತ್ತು. ಮನೆಗೆ ಮರಳಿದ ನಂತರ ಕೈ-ಕಾಲು-ಮುಖ ತೊಳೆದು ಅಮ್ಮ ಕೊಡುವ ತಿಂಡಿ ತಿಂದು ಶಾಲೆಯಲ್ಲಿ ಮಿಸ್ ಕೊಟ್ಟ ಹೋಮ್ ವರ್ಕ್ ಮಾಡುತ್ತಾ ಕೂಡುತ್ತಿದ್ದರು. ಬೇಜಾರಾದಾಗ ಮನೆಯ ದೊಡ್ಡದಾದ ಕಿಟಕಿಯಿಂದ ಹೊರಗಡೆ ರಸ್ತೆಯ ಮೇಲೆ ಕೆಲವು ಮಕ್ಕಳು ಆಡುತ್ತಿರುವುದನ್ನು ನೋಡುತ್ತ ನಿಲ್ಲುತ್ತಿದ್ದರು. ಸ್ವಲ್ಪ ಬಿಡುವಿನ ಸಮಯ ಸಿಕ್ಕರೆ ಸಾಕು, ಮೊಬೈಲ್ ನಲ್ಲಿ ಮುಳುಗುತ್ತಿದ್ದರು. ಹೀಗೆ ಅವರಿಬ್ಬರದ್ದು ಯಾಂತ್ರಿಕ ಜೀವನವಾಗಿಬಿಟ್ಟಿತ್ತು. ಬಹಳ ದಿನಗಳ ನಂತರ ಹಾಗೋ - ಹೀಗೋ ಬಿಡುವು ಮಾಡಿಕೊಂಡ ಚಿಂಕಿ-ಮಿಂಕಿಯ ಅಪ್ಪ ಅಮ್ಮ ಅವರಿಬ್ಬರನ್ನು ಕರೆದುಕೊಂಡು ಹಳ್ಳಿಗೆ ಹೊರಟರು. ದಾರಿಯುದ್ದಕ್ಕೂ ಚಿಂಕಿ-ಮಿಂಕಿ ಸುಮ್ಮನಿರದೆ ಪ್ರಶ್ನೆಗಳ ಸುರಿಮಳೆಗೈದರು. ಹಳ್ಳಿಯಲ್ಲಿ ಸುಂದರ ತೋಟವಿದ್ದು, ಅಲ್ಲಿಗೆ ಹೋಗೋಣ ಎಂದು ಅಪ್ಪ ಹೇಳಿದರು. 


ಮರುದಿನ ಚಿಂಕಿ-ಮಿಂಕಿ, ಅಪ್ಪ-ಅಮ್ಮರೊಡನೆ ತೋಟಕ್ಕೆ ಹೋದರು. ತೋಟದ ತುಂಬೆಲ್ಲ ಸಂತಸದಿಂದ ಓಡಾಡತೊಡಗಿದರು. ಆದರೆ ಅಲ್ಲಿ ಅವರು ಮಂಕಾದ ಹೂ-ಹಣ್ಣಿನ ಗಿಡಗಳು, ಹೊಂಡದಲ್ಲಿನ ಮೀನುಗಳನ್ನು ನಿಸ್ತೇಜ ಚಿಟ್ಟೆಗಳನ್ನು, ಅಳುವ ಮೋಡಗಳನ್ನು ಕಂಡರು. ಇದೆಲ್ಲವು ಅವರ ಉತ್ಸಾಹವನ್ನೇ ಕಸಿದುಕೊಂಡಂತಾಯಿತು. ಚಿಂಕಿಯು ಮೆಲ್ಲನೆ ಮಂಕಾದ ಮಾವಿನ ಮರದ ಹತ್ತಿರ ಹೋಗಿ “ಯಾಕೆ ಮರವೇ ಏನಾಯ್ತು?” ಎಂದು ಕೇಳಿದಳು.


ಮಾವಿನ ಮರ:  ಮತ್ತಿನ್ನೇನು ಚಿಂಕಿ…. ಮೊದಲೆಲ್ಲ ಚಿಕ್ಕ ಮಕ್ಕಳು ನಿಮ್ಮ ಅಜ್ಜನ (ತೋಟದ ಮಾಲೀಕ) ಕಣ್ಣು ತಪ್ಪಿಸಿ ನನ್ನ ಮೇಲೆ ಏರಿ ಮಾವಿನ ಹಣ್ಣುಗಳನ್ನು ಕಿತ್ತು ತಿಂದು ಖುಷಿ ಪಡುತ್ತಿದ್ದರು. ಅವರಿಲ್ಲದೆ ನಾನೀಗ ಒಂಟಿಯಾಗಿರುವೆ. 


ಚಿಂಕಿ: “ಈಗ ಯಾಕೆ ಅವರು ಬರುತ್ತಿಲ್ಲ?” 


ಮಾವಿನ ಮರ: ಅವಳು ಬಂದಿದ್ದಾಳಲ್ಲ ಮಾಯಗಾತಿ ಮೊಬೈಲ್ ಎಲ್ಲರೂ ಅವಳ ಜೊತೇನೆ ಆಟ ಆಡ್ತಾರೆ.


ಮಿಂಕಿ: (ಹೂವಿನ ಗಿಡಗಳಿಗೆ) “ಯಾಕೆ ಈ ಹೂಗಳು ಇಷ್ಟು ಬೇಗ ಮುದುಡಿಕೊಂಡಿವೆ?”


ಹೂವಿನ ಗಿಡಗಳು : ಮಿಂಕಿ ಮೊದಲೆಲ್ಲ ಮಕ್ಕಳು ನನ್ನಲ್ಲಿರುವ ಹೂಗಳ ಅಂದ-ಚಂದ, ಬಣ್ಣ, ಸುವಾಸನೆ ಇವೆಲ್ಲವುಗಳಿಗೆ ಮಾರು ಹೋಗಿ  ಹೂಗಳನ್ನು ತಲೆಯಲ್ಲಿ ಮುಡಿದು, ಕೈಯಲ್ಲಿ ಹಿಡಿದು ಪ್ರೀತಿಸುತ್ತಿದ್ದರು. ಆದರೆ ಈಗ ಆ ಮಕ್ಕಳು ಬರುತ್ತಿಲ್ಲ ಅವರ ಕಲರವವೂ ಕೇಳದಂತಾಗಿದೆ.


ಮನಸ್ಸಿನಲ್ಲಿಯೇ ಮಿಂಕಿ ಕಳವಳಗೊಂಡು ಮುಂದೆ ಸಾಗಿದಳು ಅಲ್ಲಿ ಚಿಟ್ಟೆಗಳನ್ನು ಕಂಡಳು.


ಮಿಂಕಿ : “ಚಿಟ್ಟೆಗಳೆ…. ಚಿಟ್ಟೆಗಳೆ…. ಯಾಕೆ ಹೀಗೆ ಸುಮ್ಮನೆ ಕುಳಿತಿದ್ದೀರಿ? ಹಾರಾಡುತ್ತಿಲ್ಲವೇಕೆ?”


ಚಿಟ್ಟೆ : ನಾವು ಮಕರಂದ ಹೀರಲು ಹೂವಿಂದ ಹೂವಿಗೆ ಹಾರಾಡುತ್ತಿದ್ದರೆ ಮಕ್ಕಳೆಲ್ಲ ನನ್ನ ಹಿಂದೆ-ಹಿಂದೆ ಓಡೋಡಿ ಹಿಡಿಯಲು ಬರುತ್ತಿದ್ದರು. ನಾನಾಗ ತಪ್ಪಿಸಿಕೊಂಡು ಹಾರುತಿದ್ದೆ. ಆದರೆ ಅವರೆಲ್ಲ ಈಗ ಯೂಟ್ಯೂಬ್ ನಲ್ಲಿನ ಹಾಡು ಕೇಳುತ್ತಾ, 


ಬಟರ್ ಫ್ಲೈ …ಬಟರ್ ಫ್ಲೈ….

ವೇರ್ ಆರ್ ಯು ಗೋಯಿಂಗ್ ?  

ಔಟ್ ಇನ್ ದ ಗಾರ್ಡನ್ ಡ್ಯಾನ್ಸಿಂಗ್ ಡಾನ್ಸಿಂಗ್, 

ಪ್ರೆಟಿ… ಪ್ರೆಟಿ… ಬಟರ್ ಫ್ಲೈ, 

ಲವ್ಲಿ… ಲವ್ಲಿ… ಬಟರ್ ಫ್ಲೈ 


ಎನ್ನುತ್ತಾ ಅಲ್ಲೇ ಕುಣಿಯುತ್ತಾರೆ ಹೊರತು ನನ್ನನ್ನು ಹಿಡಿಯಲು ಓಡಿ ಬರುವುದಿಲ್ಲ.


ಚಿಂಕಿ : “ಬೇಜಾರಾಗಬೇಡ ಚಿಟ್ಟೆ ಇನ್ನು ಮುಂದೆ ನಾವೆಲ್ಲ ಆಗಾಗ ಬಿಡುವಿದ್ದಾಗೆಲ್ಲ ನಿನ್ನ ಹತ್ತಿರ ಬರುತ್ತೇವೆ.”


ಚಿಂಕಿ - ಮಿಂಕಿ ಇಬ್ಬರು ಅಲ್ಲಿಯೇ ಇದ್ದ ನೀರಿನ ಹೊಂಡದ ಬಳಿ ಹೋದರು. ಅದರಲ್ಲಿರುವ ಮೀನುಗಳಿಗೆ ಬಿಸ್ಕಟ್ ಹಾಕಿದರು. ಆದರೆ ಮೀನುಗಳು ಮಾತ್ರ ತಿನ್ನದೆ ದೂರ ಹೋಗತೊಡಗಿದವು.


ಮಿಂಕಿ : “ನಿಲ್ಲಿ …. ನಿಲ್ಲಿ…. ಮೀನುಗಳೇ ಬಿಸ್ಕೆಟ್ ತಿನ್ನಿ ಯಾಕೆ ತಿನ್ನುತ್ತಿಲ್ಲ ನೀವೆಲ್ಲ?”


ಮೀನು : ಮಕ್ಕಳೇ ನೀವೆಲ್ಲ ನನ್ನ ಹತ್ತಿರ ಬಂದು ನೀರಲ್ಲಿ ಆಟವಾಡುತ್ತಿದ್ದರೆ ಅದನ್ನು ಕಂಡು ನಾನು ತುಂಬಾ ಖುಷಿ ಪಡುತ್ತಿದ್ದೆ. ಇತ್ತೀಚೆಗೆ ನೀವೆಲ್ಲ ಬರುವುದನ್ನೇ ನಿಲ್ಲಿಸಿದ್ದೀರಿ “ಮಛಲಿ ಜಲ್ ಕೀ ರಾನಿ ಹೈ” ಅನ್ನೋದು ನೀವು ಮರೆತಿರುವಿರಿ.


ಮೋಡಗಳು : ಹೌದು ನಂಗೂ ಹಾಗೆ ಅನಿಸುತ್ತದೆ. ನನ್ನನ್ನು ನೋಡಿ ಮಕ್ಕಳೆಲ್ಲ ಬೆಳ್ಳಿ ಮೋಡ, ಹತ್ತಿಯರಾಶಿ, ಕುದುರೆ, ಆನೆ, ತೊಟ್ಟಿಲು ಎಂದೆಲ್ಲ ವರ್ಣಿಸಿ ಹಾಡಿ ಹೊಗಳುತ್ತಿದ್ದರು. ಇತ್ತೀಚೆಗೆ ಆ ವರ್ಣನೆ ಕೇಳದೆ ನನ್ನ ಕಿವಿಗಳು ಕಿವುಡಾಗಿ ಹೋಗಿವೆ. ಈ ಮೊಬೈಲ್ ಹಾಗೂ ಟಿವಿಗಳು ಬಂದಮೇಲೆ ಮಕ್ಕಳೆಲ್ಲ ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಅವರ ನಗು, ಆಟ, ಕೂಗಾಟ, ಚೀರಾಟ ಇವೆಲ್ಲವೂ ಕೇಳದಂತಾಗಿದೆ.


ಚಿಂಕಿ-ಮಿಂಕಿ ಮಾವಿನ ಮರ, ಹೂವಿನ ಗಿಡಗಳು, ಚಿಟ್ಟೆ, ಮೀನು, ಮೋಡಗಳ ಮಾತುಗಳನ್ನು ಕೇಳಿ ನಿಜಾಂಶವನ್ನು ಅರಿತು ಮಕ್ಕಳಾದ ನಾವೆಲ್ಲ ಮೊಬೈಲ್ ಹಾಗೂ ಟಿವಿ ಗೀಳಿಗೆ ಬಿದ್ದು ನಮ್ಮ ಸುಂದರ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಅದೇ ರೀತಿ ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಿದ್ದೇವೆ. ನಿಸರ್ಗದೊಂದಿಗಿನ ಒಡನಾಟದ ಮಹತ್ವ ಮರೆತು ಪಂಜರದ ಗಿಳಿಯಾಗಿದ್ದೇವೆ ಎನ್ನುತ್ತಾ ಮಕ್ಕಳೆಲ್ಲ ಬಿಡುವಿನ ಸಮಯದಲ್ಲಿ ಹೊರ ಪ್ರಪಂಚ ಹಾಗೂ ನಿಸರ್ಗದೊಂದಿಗೆ ಬೆರೆಯಬೇಕು, ಇನ್ನು ಮುಂದೆ ನಾವೆಲ್ಲ ಹಾಗೆ ಮಾಡೋಣ ಎನ್ನುತ್ತಾ ಎಲ್ಲರಿಗೂ ಬಾಯ್ ಹೇಳಿ ಮನೆ ಕಡೆ ಹೊರಟರು.


ಉಷಾ ಗೊಬ್ಬೂರ

15/07/2024

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS