Heartly Welcome to my little Educational World. 🌍

🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

ಈ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು.ಸದಾ ತಮ್ಮ ಸೇವೆಯಲ್ಲಿ "ಶಿಕ್ಷಣ ಪ್ರತಿಬಿಂಬ"
Feature Slides

Wednesday, June 5, 2024

ಪ್ರತಿದಿನ ಪರಿಸರ ದಿನವಾಗಲಿ


ಉತ್ತರ ಪ್ರದೇಶ: ತಾಪಮಾನ ಏರಿಕೆ, ಕೊನೆ ಹಂತದ ಚುನಾವಣೆ ದಿನ 33 ಸಿಬ್ಬಂದಿ ಸಾವು.


ಅಷ್ಟೇ ಅಲ್ಲ….

ನಾಗಪುರ: ಬಿಸಿಲಿನಿಂದ 26 ಜನ ಆಸ್ಪತ್ರೆಗೆ, 2 ಮರಣ

12 ಜನರ ಬಲಿ ಪಡೆದ ಖಾರ್ಘರ್ ಬಿಸಿಲು

ಬೇಸಿಗೆ ಬವಣೆ, ಅರಣ್ಯದಲ್ಲಿ ಆನೆಗಳ ಮರಣ ಮೃದಂಗ

ಪಾಲ್ಗರ್ ನಲ್ಲಿ ಬೇಸಿಗೆಯ ಬೇಗೆಯಲ್ಲಿ 7 ಕಿ.ಮೀ. ನಡೆದುಕೊಂಡು ಹೋದ ಗರ್ಭಿಣಿಯೊಬ್ಬರು ಬಿಸಿಲಿನಿಂದ ಸಾವನ್ನಪ್ಪಿದ್ದಾರೆ.

               ಈ ಬಾರಿಯ ಬಿಸಿಲಿನ ಶಾಖದ ಹೊಡೆತಕ್ಕೆ ಮನುಷ್ಯರು, ಜಾನುವಾರುಗಳು, ಪಕ್ಷಿಗಳು, ಇತರೆ ಜೀವ ಜಂತುಗಳು ತತ್ತರಿಸಿ ಹೋಗಿವೆ. ಇತ್ತೀಚೆಗೆ ದೇಶದಲ್ಲಿಯೇ ಅತಿ ಹೆಚ್ಚು 56 ಡಿಗ್ರಿ ಸೆಲ್ಸಿಯಸ್ ತಾಪಮಾನ ನಾಗಪುರದಲ್ಲಿ ದಾಖಲಾಗಿದೆ.ಪರಿಸರದ ಮೇಲಿನ  ಕೆಟ್ಟ ಪರಿಣಾಮಗಳಿಂದಾಗಿ ಈ ಎಲ್ಲ ಅನಾಹುತಗಳು ಸಂಭವಿಸತೊಡಗಿವೆ.

             ಇದೆಲ್ಲವನ್ನು ಹೋಗಲಾಡಿಸಿ, ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು ನಾವೆಲ್ಲ “ವಿಶ್ವ ಪರಿಸರ ದಿನ”ವನ್ನು ಆಚರಿಸುತ್ತೇವೆ. ಅಂದು ಅನೇಕ ಸರ್ಕಾರಿ, ಸರ್ಕಾರೇತರ ಸಂಘ -ಸಂಸ್ಥೆಗಳು, ಶಾಲೆ, ಕಾಲೇಜುಗಳು, ಸಮುದಾಯಗಳು ಹಾಗೂ ಸಂಘಟನೆಗಳ ವತಿಯಿಂದ ಪರಿಸರ ಸಂರಕ್ಷಣೆಯ ಕುರಿತಾದ ಸಭೆ ಸಮಾರಂಭಗಳು, ಸಸಿ ನೆಡುವ ಕಾರ್ಯಕ್ರಮಗಳು ಜರುಗುತ್ತಲೇ ಇವೆ…..

              ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯೂಟ್ಯೂಬ್, ವಾಟ್ಸಾಪ್, ಟೆಲಿಗ್ರಾಂಗಳಲ್ಲಿ ವಿಶ್ವ ಪರಿಸರ ದಿನದಂದು ಇದರ ಕುರಿತಾದ ಪೋಸ್ಟರ್ಸ್, ಬ್ಯಾನರ್, ಸ್ಟೇಟಸ್, ರೀಲ್ಸ್, ವಿಡಿಯೋಗಳದ್ದೇ ದರ್ಬಾರು….

ಪರಿಸರ ಮಾಲಿನ್ಯ ನಿಲ್ಲಿಸಿ, ನಮ್ಮ ಗ್ರಹವನ್ನು ಉಳಿಸಿ.

ಕಸ ಹಾಕುವ ಮುನ್ನ ಯೋಚಿಸು.

ಉತ್ತಮ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಪೋಷಿಸೋಣ.

ನಮ್ಮ ಪರಿಸರವನ್ನು ಉಳಿಸೋಣ ಬೆಳೆಸೋಣ.

ಗ್ರಹ ಉಳಿಸಲು ಕೈಜೋಡಿಸಿ.

ನಿಮ್ಮ ಧ್ವನಿಯನ್ನು ಹೆಚ್ಚಿಸಿ ಮಾಲಿನ್ಯವನ್ನಲ್ಲ.

ಹಸಿರೇ ಉಸಿರು.

ಪರಿಸರ ಉಳಿಸಿ ಉಪಕಾರ ಮಾಡಿ.

ಭೂಮಿತಾಯಿಗೆ ನೀನು ಬೇಕು.

ಉಸಿರಾಡಲು ಪ್ರೀತಿಸಿ, ಮರಗಳನ್ನು ಉಳಿಸಿ.

ಈ ಎಲ್ಲ ಘೋಷಣೆಗಳದ್ದೇ ಕಾರಬಾರು….

ಈ ಬಾರಿಯ ಘೋಷ ವಾಕ್ಯ - “ಭೂಮಿ ಮರು ಸ್ಥಾಪನೆ, ಮರುಭೂಮಿಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ.”

ಇದೆಲ್ಲ ಒಂದೇ ದಿನದ ನಾಟಕವೇ….?

ನಾವೆಲ್ಲ ಎತ್ತ ಸಾಗುತ್ತಿದ್ದೇವೆ….?

               ಅಭಿವೃದ್ಧಿ ಹೆಸರಲ್ಲಿ ವಿನಾಶದ ಹಾದಿ ತುಳಿಯುತ್ತಿದ್ದೇವೆ. ನಾವು ತೋಡಿದ ಖೆಡ್ಡಾದಲ್ಲಿ ನಾವೇ ಬಿದ್ದು ಏಳಲಾಗದೆ ಒದ್ದಾಡುತ್ತಿದ್ದೇವೆ. ಕಿಂಚಿತ್ತು ಯೋಚಿಸದೆ ಪ್ರಕೃತಿಯನ್ನು ಧಾರಾಳವಾಗಿ ನಾಶ ಮಾಡುತ್ತಿದ್ದೇವೆ. ನಮ್ಮ ಈ ಶೋಕಿ ಹಾಗೂ ಆಧುನಿಕತೆಯ ಖಯಾಲಿಯಿಂದ ಪರಿಸರಕ್ಕೆ ಪೆಟ್ಟು ಬೀಳುತ್ತಿದೆ.

               ಔದ್ಯೋಗಿಕರಣ, ರಸ್ತೆಯ ಅಗಲೀಕರಣ, ಕಾಂಕ್ರೀಟ್ ರಸ್ತೆಗಳು, ದೊಡ್ಡ ಬಂಗಲೆ, ಪ್ರತಿಯೊಬ್ಬರಿಗೂ ಒಂದೊಂದು ಬೈಕ್, ಮನೆಗೆ ನಾಲ್ಕಾರು ಕಾರು, ವಿದ್ಯುತ್ ಇಲ್ಲದ ಜೀವನವಿಲ್ಲ, ಪ್ರತಿ ರೂಮಲ್ಲಿ AC, ಕಾರಲ್ಲಿ AC, ಬಾರಲ್ಲಿ AC, ಬಸ್ಸಲ್ಲಿ AC, ಟ್ರೈನ್ ನಲ್ಲಿ AC, ಆಫೀಸ್ ನಲ್ಲಿ AC, ವಿಮಾನಿನಲ್ಲಿ‌ AC …. ಅಬ್ಬಾ, AC  ಅಂದರೀಗ ಫ್ಯಾಷನ್ ಹಾಗೂ ಪ್ರತಿಷ್ಠೆ. ವಿಲಾಸಿ ಜೀವನ ಶೈಲಿ ಕೈಗೊಂದು ಮೊಬೈಲು, ಹೆಗಲಿಗೊಂದು ಲ್ಯಾಪ್‌ಟಾಪ್, ಇಂಟರ್ನೆಟ್ಟು ಇವೆಲ್ಲ ಉಸಿರಾಡಲು ಬೇಕೇ ಬೇಕು ಎಂಬಂತಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಲೇ ಇದ್ದೇವೆ. ತಂತ್ರಜ್ಞಾನ ಮುಂದುವರಿಯುತ್ತಲೇ ಇದೆ. ಜೊತೆಗೆ ಸಾವಿರಾರು ರೋಗಗಳನ್ನು ಬರಮಾಡಿಕೊಳ್ಳುತ್ತಲೇ ಇದ್ದೇವೆ.

           ಬಿಸಿಲಿನ ಹೊಡೆತ, ನೀರಿಗೆ ಹಾಹಾಕಾರ, ಅಂತರ್ಜಲ ಕುಸಿತ, ಮಳೆ ಬಾರದೇ ರೈತರ ಆತ್ಮಹತ್ಯೆ, ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿ ಸಾಕೇ….. ಬೇಕೇ….?ಸಾಕೆನ್ನುವ ಮಾತೇ ಇಲ್ಲ ಪ್ರಕೃತಿಯಿಂದ ಬಾಚಿ ದೋಚಿಕೊಳ್ಳುವ ಚಾಳಿಯನ್ನು ನಾವೆಲ್ಲ ಬೆಳೆಸಿಕೊಂಡಿದ್ದೇವೆ. ಪಡೆಯುವುದು ಅಷ್ಟೇ, ಕೊಡುವ ಮಾತೇ ಇಲ್ಲ. ದಿನನಿತ್ಯದ ಜೀವನದಲ್ಲಿ ಪರಿಸರ ನಾಶವನ್ನೇ ಕಾಯಕವನ್ನಾಗಿಸಿ, (ಪ್ಲಾಸ್ಟಿಕ್ ಬಳಕೆ, ಪರಿಸರ ಮಾಲಿನ್ಯ, ಅತಿಯಾದ ನೀರಿನ ಬಳಕೆ, ಮರಗಳನ್ನು ಕಡಿಯುವುದು ಇತ್ಯಾದಿ) ಪ್ರತಿ ವರ್ಷ ಜೂನ್ 5 ರಂದು ಮಾತ್ರ “ವಿಶ್ವ ಪರಿಸರ ದಿನಾಚರಣೆ”ಯ ನೆಪದಲ್ಲಿ ಸಸಿ ನೆಡುವ ಸೋಗು!!

                ಪರಿಸರದಿಂದ ಪಡೆಯುವ ಶುದ್ಧ ನೀರು, ಗಾಳಿ, ಆಹಾರ ಎಲ್ಲದರಲ್ಲಿ ನಾವಿಂದು ವಿಷ ಬೆರೆಸಿ ಆ ವಿಷವನ್ನು ನಾವೇ ದಿನನಿತ್ಯ ಸೇವಿಸುತ್ತಾ ನಮ್ಮ ಸಾವಿಗೆ ನಾವೇ ಕಾರಣರಾಗುತ್ತಿದ್ದೇವೆ. ನಮ್ಮ ಜೀವ ನಮ್ಮ ಕೈಯಲ್ಲಿಯೇ ಇದೆ. ಆದರೆ ಅದನ್ನು ದೇಹದಿಂದ ಬೇರ್ಪಡಿಸುತ್ತಿದ್ದೇವೆ. ಹಾಲಿನ ಬದಲು ಹಾಲಾಹಲ ಸೇವಿಸುತ್ತಿದ್ದೇವೆ.

ವಿಲಾಸಿ ಜೀವನಕ್ಕಾಗಿ ಯಾವುದೇ ರಾಜಿ ಬೇಡವೆನ್ನುತ್ತ ಪರಿಸರ ನಾಶಕ್ಕೆ ರಾಜಿಯಾಗುವುದೇ….?

                ನಾವು ಪರಿಸರವನ್ನು ಒಂದು ಪಟ್ಟು ನಾಶಪಡಿಸಿದರೆ ಅದು ನಮ್ಮನ್ನು ಹತ್ತು ಪಟ್ಟು ನಾಶಪಡಿಸುತ್ತದೆ. ಇದೆಲ್ಲವೂ ನಮ್ಮ ಅರಿವಿಗೆ ಬಾರದೇ ಇರದು, ಆದರೂ ನಾವು ಇಂದಿಗೂ ಎಚ್ಚೆತ್ತುಕೊಂಡಿಲ್ಲ. ಸಾಗರದಲ್ಲಿನ ಒಂದು ಹನಿಯ ಸಾವಿರದ ಒಂದನೇ ಭಾಗದಷ್ಟು ಜನ ಮಾತ್ರ ಪರಿಸರದ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಅದನ್ನು ನಾವೆಲ್ಲ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ,  ಓದುತ್ತಿದ್ದೇವೆ ಅಷ್ಟೇ….

ಅವರಲ್ಲಿ…

               ಮೂಕ ಪೃಥ್ವಿಗೆ ಮಾತು ಕೊಟ್ಟ  ಕಿಶೋರಿ - ಗ್ರೇತಾ ಥನ್ ಬರ್ಗ್, ಮೇಧಾ ಪಟ್ಕರ್,  ಸಾಲುಮರದ ತಿಮ್ಮಕ್ಕ, ಬಾಬಾ ಆಮ್ಟೆ, ಸುಂದರಲಾಲ ಬಹುಗುಣ, ಶಿವರಾಮ ಕಾರಂತ್, ಭಾರತದ ಫಾರೆಸ್ಟ್ ಮ್ಯಾನ್ ಜಾದವ್ ಮೊಲಾಯ್ ಪಾಯಂಗ್, 1.3 ಮಿಲಿಯನ್‌ ಸಸಿಗಳನ್ನು ನೆಟ್ಟ 13 ವರ್ಷದ ಪೋರಿ…. The Tree  girl of Africa - Ellyanne Wanjiku Chystun, 10 ಸಾವಿರ ಮರಗಳ ಸರದಾರ ರಾಯಚೂರಿನ ಈರಣ್ಣ ಇವರೆಲ್ಲ ತಮ್ಮ ಜೀವನವನ್ನೇ ಪರಿಸರಕ್ಕಾಗಿ ಪಣಕ್ಕಿಟ್ಟವರು.

        ಪ್ರತಿಯೊಬ್ಬರಿಗೂ ಇದು ಸಾಧ್ಯವಾಗದ ಮಾತು ಆದರೆ ನಮ್ಮ ಸಾಮರ್ಥ್ಯ, ವ್ಯಾಪ್ತಿ, ಶಕ್ತಿ ಇನ್ನಿತರೆ ಅನುಕೂಲತೆಗಳೊಂದಿಗೆ ಇಂತಿಷ್ಟಾದರೂ ಮಾಡಬಹುದಲ್ಲವೇ…..

# ನಮ್ಮ ಮನೆ ಅಂಗಳ, ಶಾಲಾ,ಕಾಲೇಜುಗಳ ಆವರಣ, ನಾವಿರುವ ಹಳ್ಳಿ, ಊರುಗಳಲ್ಲಿ ಸಸಿ ನೆಟ್ಟು ಬೆಳೆಸುವುದು.

# ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು.

# ನೀರು ಹಾಗೂ ವಿದ್ಯುತ್ತಿನ ಮಿತವಾದ ಬಳಕೆ.

# ಹಸಿ - ಒಣ ಕಸಗಳ ಸೂಕ್ತ ವಿಲೇವಾರಿ.

# ಸಾಧ್ಯತೆಗಳಿದ್ದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುವುದು.

# ಮಳೆ ನೀರು ಕೊಯ್ಲು ( ಶಾಲೆ, ಕಾಲೇಜು, ಮನೆ, ಕಚೇರಿಗಳಲ್ಲಿ )

# ಅಗತ್ಯವಿದ್ದಾಗ ಮಾತ್ರ ಕಾರಿನ ಬಳಕೆ.

# AC ಯ ದಾಸರಾಗುವುದು ಬೇಡ.

# ಬಟ್ಟೆ ಚೀಲಗಳ ಬಳಕೆ.

# ರಾಸಾಯನಿಕ ಗೊಬ್ಬರಗಳ ಬದಲು-ಸಾವಯವ ಗೊಬ್ಬರಗಳ ಬಳಕೆ.

# ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸಲು ಪ್ರಯತ್ನ.

# ಸೋಲಾರ್ ಬಳಕೆ.

# ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವುದು.

# ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ.

ನಮಗೆ ಈ ಮೇಲಿನ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯತೆಗಳಿವೆ.

                 ನಮ್ಮ ದೇಶದ ನಿರ್ದಿಷ್ಟ ಅರಣ್ಯ ಪ್ರದೇಶದ ಪ್ರಮಾಣ 33% ಇರಬೇಕು. ಆದರೆ 2024 ರ ಪ್ರಕಾರ 24.62% ಇದೆ. ಕರ್ನಾಟಕ ರಾಜ್ಯದ 2024ರ ಅರಣ್ಯ ಪ್ರದೇಶದ ಪ್ರಮಾಣ 21.2% ಇದೆ. ಅಗತ್ಯ ಅರಣ್ಯ ಪ್ರದೇಶದ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಹಾಗೂ ಪರಿಸರ ಸಂರಕ್ಷಣೆಗಾಗಿ ಸರಕಾರವು ಗುರುತರ ಹೆಜ್ಜೆಯನ್ನಿಡಬೇಕು. ಯೋಜನೆಗಳನ್ನು ಹಾಕಿಕೊಂಡು , ಕಾರ್ಯರೂಪಕ್ಕೆ ತಂದು ಯಶಸ್ವಿಗೊಳಿಸಲೇಬೇಕು…..ಅದಕ್ಕೆ ಇನ್ನಷ್ಟು ತಡ ಮಾಡಿದರೆ ನಮಗೆಲ್ಲ ಉಳಿಗಾಲವಿಲ್ಲ.

ಋಣವ ತೀರಿಸಬೇಕು, ಋಣವ ತೀರಿಸಬೇಕು |

ಋಣವ ತೀರಿಸುತ ಜಗದಾದಿ ತತ್ವವನು 

ಜನದಿ ಕಾಣುತ್ತಿದರೊಳ್ ಒಂದಗೂಡಲು ಬೇರು |

ಮನೆಯೊಳಗೆ ಮಠ ನಿನಗೆ - ಮಂಕುತಿಮ್ಮ


ಹುಚ್ಚು ಹೆಚ್ಚಲಿ


ಅದೆಷ್ಟು ಪ್ರೀತಿ ಅಡಗಿದೆ ;

ಬಿಡುವುದಿಲ್ಲ ಮುತ್ತಿಬಿಡುವೆ !

ಸಿರಿಯ ಕಂಡು ಹಿಗ್ಗಿಬಿಡುವೆ ;

ಬಾಹುಗಳಿಂದ ಬಾಚುವೆ !


ತಲೆಯ ಹೊರೆಯ ಇಳಿಸುವೆ ;

ಭಾರ ಹಗುರ ಮಾಡುವೆ !

ಭಕ್ತಿ ಭಾವದಿಂದ ಪೂಜೆಗೈವೆ ;

ಜಪಿಸುತ ಸುತ್ತು ಹೊಡೆವೆ !


ಸದಾ ಸಮರ್ಪಿಸಿಕೊಂಡಿರುವೆ

ಮೈಯನೊಡ್ಡಿ ಮಳೆ-ಗಾಳಿ-ಚಳಿಗೆ !

ನಿನ್ನ ಕುಲವನೆಲ್ಲ ಪೊರೆವೆ ,

ಆದರೂ ಕತ್ತಿಯನೇಕೆ ಮಸಿಯುವೆ ?


ಮತಿಯಲಿ ಮಣ್ಣು ತುಂಬಿದ ಮಂಕೆ ;

ನಾನೊಂದು ಚೇತನ ನೀನರಿಯೆ !

ಕಡಿಯದಿರು ಹೃದಯವನು ;

ತಪ್ಪು ಮಾಡಿ ಕಲ್ಲು ದೇವರ ಪ್ರಾರ್ಥಿಸುವೆ, 

ಭೂ ಒಡಲೇ ಬಾಯ್ದೆರೆದು ನುಂಗೀತು ಜೋಕೆ !


ಸೂರ್ಯನ ಸಹನೆ ಕಟ್ಟೆ ಒಡೆದು,

ಬೆಂಕಿಯುಂಡೆಯಾದ ನೋಡು !

ನದಿ-ಹಳ್ಳ-ಕೊಳ್ಳ ಬರಿದಾಗಿ ,

ಖಗ-ಮೃಗ-ಪಕ್ಷಿ ಹಲುಬುತ್ತಿವೆ !


ಕೇಳು ಕೂಸೆ ನನ್ನ ಮಾತು ;

ನಮ್ಮಿಬ್ಬರ ನಡುವ ಕೊಂಡಿ

ಕಳಚದಿರಲಿ ಎಂದಿಗೂ !

ನನ್ನ ಕುಲವ ಬೆಳೆಸು ನೀನು,

ನಿನ್ನ ಕುಲವದು ಉಳಿಯಲಿ !


ಹಸಿರು ಹುಚ್ಚು ಹೆಚ್ಚಲಿ ;

ಜಗವದು ತಣಿಯಲಿ ;

ಜೀವ-ಜಂತು ನಲಿಯಲಿ !!


-ಉಷಾ ಗೊಬ್ಬೂರ

02/06/2024






 

ವಿಶ್ವ ಸ್ತನ್ಯಪಾನ ಸಪ್ತಾಹ

  ಅಮೃತಪಾನ ಎದೆಹಾಲು ಯಾಕಳುವೆ ಎಲೆರಂಗ, ಬೇಕಾದ್ದು ನಿನಗೀವೆ ನಾ ಕೆಮ್ಮಿ ಕರೆದ ನೊರೆ ಹಾಲು-ಸಕ್ಕರೆ | ನೀ ಕೇಳಿದಾಗ ಕೊಡುವೇನು || ಈ ಜನಪದದ ಸಾಲು...

RECENT POSTS